ಚಿಕ್ಕಬಳ್ಳಾಪುರ: ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ನೌಕರನೊಬ್ಬ ಗ್ರಾಮ ಪಂಚಾಯತಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೀರೆಕಟ್ಟಿಗೇನಹಳ್ಳಿಯಲ್ಲಿ ನಡೆದಿದೆ. ರಾಮಕೃಷ್ಣಪ್ಪ (52) ನೇಣಿಗೆ ಶರಣಾದ ನೌಕರ ಎನ್ನಲಾಗಿದೆ.
ಕಳೆದ 10 ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಪಂಪ್ಸೆಟ್ ಆಪರೇಟರ್ ಆಗಿ ಗ್ರಾಮ ಪಂಚಾಯತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಕುಡಿತದ ಚಟದಿಂದ ಈತ ಕೆಲಸಕ್ಕೆ ಸರಿಯಾಗಿ ಬರದಿದ್ದರಿಂದ ಹಿರಿಯ ಅಧಿಕಾರಿಗಳು ಸಾಕಷ್ಟು ಬಾರಿ ಕೆಲಸದಿಂದ ತೆಗೆದು ಹಾಕುವುದಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಆದರೂ ತನ್ನ ಪಾಡಿಗೆ ತಾನು ಸಂಬಳ ತೆಗೆದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದನಂತೆ. ಹೀಗಾಗಿ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದಕ್ಕೂ ಮುನ್ನ ರಾಮಕೃಷ್ಣಪ್ಪ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಆದ್ರೆ ಗ್ರಾಮಸ್ಥರ ನೆರವಿನಿಂದ ಬದುಕಿದ್ದ. ಸದ್ಯ ಇಂದು ಗ್ರಾಮ ಪಂಚಾಯತಿಯಲ್ಲಿ ಯಾರು ಇಲ್ಲದ ವೇಳೆ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗ್ರಾಮ ಪಂಚಾಯತಿ ವತಿಯಿಂದ ಕುಟುಂಬಸ್ಥರಿಗೆ 10 ಸಾವಿರ ನೆರವು ನೀಡಿದ್ದಾರೆ. ಇನ್ನು ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಸೇರಿದಂತೆ ತಾಹಶೀಲ್ದಾರ್ ವಿಶ್ವನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ದೂರು ದಾಖಲಾಗಿದೆ.