ಚಿಕ್ಕಬಳ್ಳಾಪುರ: ಕೋರ್ಟ್ ಅಟೆಂಡರ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ವಕೀಲ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಮೃತ ಆರೋಪಿಯನ್ನು ಕೊರ್ಟ್ ವಕೀಲ ನವೀನ್ ಕುಮಾರ್ ಎಂದು ಗುರುತಿಸಲಾಗಿದೆ. ಕೋರ್ಟ್ ಅಟೆಂಡರ್ ನವೀನ್ ಕುಮಾರ್ ಕೊಲೆ ಹಿನ್ನೆಲೆಯಲ್ಲಿ ಮುಖ್ಯ ಆರೋಪಿಯಾಗಿ ಸೆರೆಯಾಗಿದ್ದ ಈತ ಜಿಲ್ಲೆಯ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿದ್ದನು.
ಕಳೆದ ಆ. 17ರಂದು ಚಿಕ್ಕಬಳ್ಳಾಪುರದ ಪ್ರಶಾಂತ ನಗರದ ಬಾಡಿಗೆ ಕೊಠಡಿಯೊಂದರಲ್ಲಿ ಸಿವಿಲ್ ನ್ಯಾಯಾಲಯದ ಅಟೆಂಡರ್ ನವೀನ್ ಎಂಬಾತನನ್ನು ಜೀನ್ಸ್ ಪ್ಯಾಂಟಿನಿಂದ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪ್ರೇಯಿಸಿ ದೀಪಾ, ಈಕೆಯ ಪ್ರೇಮಿ ವಕೀಲ ನವೀನ್ ಮತ್ತು ಆತನ ಇಬ್ಬರು ಕ್ಲೈಂಟ್‍ಗಳನ್ನು ಬಂಧಿಸಲಾಗಿತ್ತು.
ಓದಿ: ಸುರೇಶ ಅಂಗಡಿ ಪುತ್ರಿ, ಜಗದೀಶ್ ಶೆಟ್ಟರ್ ಸೊಸೆ ರಾಜಕೀಯ ಎಂಟ್ರಿ!?
ಇಂದು ಕಾರಾಗೃಹದಲ್ಲಿ ಆರೋಪಿ ನವೀನ್ ಅಸ್ವಸ್ಥನಾಗಿ ಬಿದ್ದಿದ್ದನು. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದ್ದು, ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ನವೀನ್ನನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆದಲ್ಲಿ ಸಾವನ್ನಪ್ಪಿದ್ದಾನೆ.
ಪೊಲೀಸ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ನವೀನ್ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.