ಚಿಕ್ಕಬಳ್ಳಾಪುರ: ಶಾಸಕರ ದೊಡ್ಡ ಮಟ್ಟದ ರಾಜೀನಾಮೆ ಮತ್ತೊಂದು ಸರ್ಕಾರ ರಚನೆ ಮಾಡೋಕೆ ಆಹ್ವಾನ ಕೊಡಬಹುದು. ಕಾದು ನೋಡೋಣ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಹೇಳಿದ್ದಾರೆ.
ತಾಲೂಕಿನ ಡಿ.ಪಾಳ್ಯದಲ್ಲಿ ಆಯೋಜನೆಗೊಂಡಿದ್ದ ಜನಸ್ಪಂದನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ಮಟ್ಟದಲ್ಲಿ ರಾಜೀನಾಮೆ ಕೊಡಲು ತಯಾರಾಗಿರುವುದು ನನಗೆ ಆಶ್ಚರ್ಯ ತಂದಿದೆ. ರಾಜಕಾರಣದಲ್ಲಿ ಯಾವ ರೀತಿ ಪರಿಸ್ಥಿತಿ ಬಂದ್ರೂ ನಾವು ಎದುರಿಸಬೇಕಾಗುತ್ತೆ. ಸದ್ಯ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ರಾಜೀನಾಮೆ ಸಲ್ಲಿಸಿದ್ರೆ ಸ್ಪೀಕರ್ ಅಂಗೀಕಾರ ಮಾಡಬೇಕಾಗುತ್ತೆ. ಮುಂದೆ ರಾಜ್ಯಪಾಲರು ಯಾವ ರೀತಿ ಕ್ರಮ ವಹಿಸ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಮುಂದೆ ಮತ್ತೊಂದು ಸರ್ಕಾರ ರಚನೆ ಮಾಡೋಕೆ ಆಹ್ವಾನ ಕೊಡಬಹುದು ಎಂದರು.
ಇನ್ನು ಮೈತ್ರಿಯಲ್ಲಿ ಹೊಂದಾಣಿಕೆ ಆಗಿಲ್ಲ. ಕೆಲ ಹಿರಿಯರಿಗೆ ಅರ್ಹತೆ ಇದ್ರೂ ಮಂತ್ರಿ ಮಾಡಿಲ್ಲ ಅನ್ನೋ ನೋವು ಇರಬಹುದು. ಹೀಗೆ ಹಲವು ಕಾರಣಗಳಿಂದ ರಾಜೀನಾಮೆ ನೀಡಿರಬಹದು. ದೋಸ್ತಿ ಸರ್ಕಾರದಲ್ಲಿ ಎಲ್ಲರನ್ನ ಸಮರ್ಪಕವಾಗಿ ಸಮನ್ವಯಕ್ಕೆ ತೆಗೆದುಕೊಳ್ಳೋಕೆ ಬಹುಶಃ ಆಗ್ಲೇ ಇಲ್ಲ ಅನ್ನೋದು ಅವರ ದೃಷ್ಠಿಕೋನ ಇರಬಹುದು. ದೋಸ್ತಿ ಸರ್ಕಾರದಲ್ಲಿ ಹಲವರಿಗೆ ಬೇಸರ ಆಗಿದೆ. ಅದಕ್ಕೆ ರಾಜೀನಾಮೆ ನೀಡಿರಬಹುದೆಂದು ಹೇಳಿದ್ದಾರೆ.