ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಶುಕ್ರವಾರ ಸುರಿದ ಮಳೆಗೆ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಬಹುತೇಕ ರೈತರು ಪ್ರಮುಖ ಬೆಳೆ ನೆಲಗಡಲೆಯನ್ನು ಬೆಳೆಯಲು ಮುಂದಾಗಿದ್ದಾರೆ.
ಮುಂಗಾರು ಅಂದ್ರೆ ರೈತರಿಗೆ ವಿಶೇಷ. ನೆಲ ಉತ್ತಿ, ಬಿತ್ತನೆಗೆ ತಯಾರಿ ನಡೆಸುವುದರಿಂದ ಹಿಡಿದು ವರ್ಷ ಪೂರ್ತಿ ತನ್ನ ಕೃಷಿ ಚಟುವಟಿಕೆಗಳು ಹೇಗಿರಬೇಕು ಎಂದು ಕ್ರಿಯಾ ಯೋಜನೆ ರೂಪಿಸಿಕೊಳ್ಳುತ್ತಾನೆ. ಯಾವ ಮಳೆಗೆ ಯಾವ ಬೆಳೆ ಅಥವಾ ಬೀಜ ಬಿತ್ತಬೇಕು?, ಯಾವ ಸಂದರ್ಭದಲ್ಲಿ ಕಳೆ ಕೀಳಬೇಕು? ಕಟಾವು ಹೇಗೆ ಮಾಡಬೇಕು? ಈ ಎಲ್ಲ ಚಟುವಟಿಕೆಗಳಿಗೆ ತಗಲುವ ವೆಚ್ಚದ ಕುರಿತು ಲೆಕ್ಕಾಚಾರಗಳನ್ನು ಮೊದಲೇ ಅಂದಾಜಿಸುತ್ತಾನೆ.
ಇನ್ನು ಸರ್ಕಾರವು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಕಾಲದಲ್ಲಿ ಒದಗಿಸಲು ಮುಂದಾಗಬೇಕು. ಕಳೆದ ಸಲ ತಾಲೂಕಿನಲ್ಲಿ ಮುಂಗಾರು ಮುಗಿದು ಹಿಂಗಾರಿನ ಸಮಯದಲ್ಲಿ ನೆಲಗಡಲೆ ಹಂಚಿಕೆಯಾಗಿತ್ತು. ಇದರಿಂದ ಬಹಳಷ್ಟು ರೈತರಿಗೆ ತೊಂದರೆಯಾಗಿತ್ತು ಎಂದು ಕೊಲಿಂಪಲ್ಲಿ ರೈತ ಸಿ.ಚಲಪತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆಗೆ ಅನುಕೂಲವಾಗುವಷ್ಟು ಮಳೆಯಾಗಿದೆ. ಇದರಿಂದ ಆತಂಕದಲ್ಲಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಹೀಗೆ ಸಕಾಲದಲ್ಲಿ ಉತ್ತಮ ಮಳೆಯಾದರೆ ರೈತನ ಬದುಕು ಕೊಂಚ ನಿರಾಳತೆಯಿಂದ ಕೂಡಿರುತ್ತದೆ.