ಚಿಕ್ಕಬಳ್ಳಾಪುರ: ಆಸ್ತಿ ವಿವಾದ ಹಿನ್ನಲೆ ಜೆಡಿಎಸ್ ಕಾರ್ಯಕರ್ತನನ್ನು ಕೊಲೆ ಮಾಡಿ ಅಪಘಾತ ಎಂದು ಸೃಷ್ಟಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕನ್ನಮಂಗಲ ಗ್ರಾಮದ ವೆಂಕಟೇಶ್ ಬಂಧಿತ ಆರೋಪಿ. ಶಿಡ್ಲಘಟ್ಟ ತಾಲೂಕಿನ ಕನ್ನಮಂಗಲ ಗ್ರಾಮದ ಜೆಡಿಎಸ್ ಕಾರ್ಯಕರ್ತ ಚಿಕ್ಕಆಂಜಿನಪ್ಪ ಇದೇ ತಿಂಗಳ 2ರಂದು ರಾತ್ರಿ ಸುಮಾರು 10ಕ್ಕೆ ಶಿಡ್ಲಘಟ್ಟದಿಂದ ಚಿಕ್ಕದಾಸರಹಳ್ಳಿ ಮಾರ್ಗವಾಗಿ ಕನ್ನಮಂಗಲಕ್ಕೆ ಹೋಗುವಾಗ, ನಾರಾಯಣದಾಸರಹಳ್ಳಿ ಗೇಟ್ ಸಮೀಪ ಅನುಮಾನಾಸ್ಪದವಾಗಿ ತಲೆಗೆ ಗಂಭೀರ ಗಾಯವಾಗಿ ರಕ್ತ ಸ್ರಾವವಾಗಿ ರಸ್ತೆಯಲ್ಲೇ ಮೃತಪಟ್ಟಿದ್ದರು.
ಈ ಬಗ್ಗೆ ಚಿಕ್ಕಆಂಜಿನಪ್ಪ ಅವರ ಸಹೋದರ ಅಶ್ವತ್ಥಪ್ಪ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕೊಲೆ ಆರೋಪದ ದೂರು ದಾಖಲಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಪರಾಧ ತಂಡವನ್ನು ರಚಿಸಿ, ಕೊಲೆಯಾಗಿರುವ ಚಿಕ್ಕ ಆಂಜಿನಪ್ಪ ಅವರ ಮೊಬೈಲ್ ನಂಬರ್ ಕರೆಗಳ ಜಾಡು ಹಿಡಿದು ತನಿಖೆ ಕೈಗೊಂಡಿದ್ದರು. ಕೊಲೆಯಾದ ದಿನ ಮೃತ ಆಂಜಿನಪ್ಪ ಅವರ ನಂಬರ್ಗೆ ಅನುಮಾನಾಸ್ಪದವಾಗಿ ಕನ್ನಮಂಗಲ ಗ್ರಾಮದ ವೆಂಕಟೇಶ್ ಬಿನ್ ಲಕ್ಸ್ಯಮಯ್ಯ ಎಂಬುವರು ಹಲವು ಬಾರಿ ಕರೆ ಮಾಡಿದ್ದರು.
ಜೂನ್ 14 ರಂದು ಕನ್ನಮಂಗಲ ಗ್ರಾಮದಲ್ಲಿ ವೆಂಕಟೇಶ್ನನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆ ನಡೆಸಿದಾಗ, ತನ್ನ ಅಣ್ಣ ನಾಗೇಶ್ ಅವರ ಜೊತೆ ಚಿಕ್ಕಆಂಜಿನಪ್ಪ ಸೇರಿಕೊಂಡು ತಮ್ಮ ಎಲ್ಲ ಜಮೀನನ್ನು ಅಣ್ಣ ನಾಗೇಶ್ ಅವರ ಹೆಸರಿಗೆ ಮಾಡಿಸುತ್ತಾನೆ ಎಂದು ತಿಳಿದುಕೊಂಡು, ಇವನು ಬದುಕಿದ್ದರೆ ನನಗೆ ಜಮೀನು ಇಲ್ಲದಂತೆ ಮಾಡುತ್ತಾನೆ ಎಂದು ಯೋಚಿಸಿದ್ದಾನೆ.
ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು, ಎಲ್ಲಿದ್ದಾನೆ ಎಂಬುವುದನ್ನು ಫೋನ್ ಮುಖಾಂತರ ತಿಳಿದುಕೊಂಡು ನಾರಾಯಣ ದಾಸರಹಳ್ಳಿ ಗೇಟ್ ಬಳಿಯಿರುವ ಆಂಜನೇಯಸ್ವಾಮಿ ದೇವಾಲಯದ ಬಳಿ ಬೈಕ್ನಲ್ಲಿ ಹೋಗುತ್ತಿದ್ದ ಆಂಜಿನಪ್ಪನನ್ನು ಅಡ್ಡಗಟ್ಟಿ ನೀಲಗಿರಿ ದೊಣ್ಣೆಯಿಂದ ತಲೆಗೆ ಹೊಡೆದು, ಅಲ್ಲಿಂದ ಎಸ್ಕೇಪ್ ಆಗಿದ್ದಾಗಿ ಆರೋಪಿ ಪೊಲೀಸರಿಗೆ ಹೇಳಿ, ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪತ್ತೆ ಕಾರ್ಯದ ತಂಡದ ನೇತೃತ್ವ ವಹಿಸಿದ ಪ್ರಕರಣದ ಸರ್ಕಲ್ ಇನ್ಸ್ಪೆಕ್ಟರ್ ಧರ್ಮೇಗೌಡ, ಎಸ್ಪಿ ಮಿಥುನ್ ಕುಮಾರ್, ಎಸ್ಎಸ್ಪಿ ಕುಶಾಲ್ ಚೌಕ್ಸಿ, ಗ್ರಾಮಾಂತರ ಠಾಣೆ ಸತೀಶ್, ಪಿಎಸ್ಐ ಸೌಜನ್ಯ, ಸಿಬ್ಬಂದಿ ನಂದಕುಮಾರ್, ಸುನಿಲ್ ಕುಮಾರ್, ಅಮರನಾಥ, ಕೃಷ್ಣಪ್ಪ ಟಿ.ಸಿ, ಹಾಗೂ ಜೀಪ್ ಚಾಲಕರಾದ ಎಚ್.ಸಿ. ನಾಗೇಶ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಬೈಕ್ ಬಿಟ್ಟು ಪರಾರಿಯಾದ ಯುವಕನ ಬಂಧನ