ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕು ಮುರುಗಮಲ್ಲ ಬಳಿ ಖಾಸಗಿ ಬಸ್ ಹಾಗೂ ಟಾಟಾ ಏಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ 11 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
ಮುರುಗಮಲ್ಲದಿಂದ ಚಿಂತಾಮಣಿ ಕಡೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಚಿಂತಾಮಣಿಯಿಂದ ಮುರುಗಮಲ್ಲ ಕಡೆ ಹೋಗುತ್ತಿದ್ದ ಟಾಟಾ ಏಸ್ ನಡುವೆ ಅಪಘಾತ ನಡೆದಿದೆ. ಗಾಯಾಳುಗಳನ್ನು ಕೋಲಾರ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಚಿಂತಾಮಣಿ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಘಟನೆಯಲ್ಲಿ ಮೂವರು ಹೆಂಗಸರು, 8 ಜನ ಗಂಡಸರು ಮೃತಪಟ್ಟಿದ್ದಾರೆ. ಖಾಸಗಿ ಬಸ್ ಮುರುಗಮಲದಿಂದ ಚಿಂತಾಮಣಿ ಕಡೆಗೆ ಹೋಗುತ್ತಿತ್ತು, ಟಾಟಾ ಏಸ್ ಚಿಂತಾಮಣಿಯಿಂದ ಮುರುಗಮಲೆಗೆ ತೆರಳುತ್ತಿತ್ತು. ಬಸ್ ಚಾಲಕನ ಅತೀವೇಗವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಇನ್ನು ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ,ತಹಸೀಲ್ದಾರ್, ಸಬ್ ಇನ್ಸ್ಪೆಕ್ಟರ್, ಸರ್ಕಲ್ ಇನ್ಸ್ಪೆಕ್ಟರ್ ಭೇಟಿ ನೀಡಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.