ಚಿಕ್ಕಬಳ್ಳಾಪುರ : ಗೃಹರಕ್ಷಕ ದಳದ (ಹೋಂ ಗಾರ್ಡ್) ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸುವ ಸಲುವಾಗಿ 45 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹೋಂ ಗಾರ್ಡ್ ಕಮಾಂಡೆಂಟ್ ಎಸಿಬಿ ಬಲೆಗೆ ಬಿದ್ದ ಘಟನೆ ನಗರದಲ್ಲಿ ನಡೆದಿದೆ.
ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್ ಆಂಜಿನಪ್ಪ ಎಸಿಬಿ ಬಲೆಗೆ ಬಿದ್ದ ಅಧಿಕಾರಿ ಎಂದು ತಿಳಿದು ಬಂದಿದೆ. ಹೋಂ ಗಾರ್ಡ್ ಚೇತನ್ ಕುಮಾರ್ ಎಂಬುವವರಿಗೆ ಕರ್ತವ್ಯಕ್ಕೆ ನಿಯೋಜಿಸಲು 45 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಲಂಚದ ಹಣವನ್ನು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಹಿಡಿದ್ದಾರೆ.
ಎಸಿಬಿ ಡಿವೈಎಸ್ಪಿ ಪಿ.ಮಂಜುನಾಥ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಲಕ್ಷ್ಮೀದೇವಮ್ಮ, ಮಂಜುಳಾ ಮತ್ತು ಸಿಬ್ಬಂದಿ ದಾಳಿಯಲ್ಲಿದ್ದರು. ವಶಕ್ಕೆ ಪಡೆದ ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್ ಆಂಜಿನಪ್ಪನನ್ನು ಇದೀಗ ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಆಂಜಿನಪ್ಪ ಇತ್ತೀಚೆಗಷ್ಟೇ ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್ ಆಗಿ ನೇಮಕವಾಗಿದ್ದ ಎಂದು ತಿಳಿದು ಬಂದಿದೆ.