ಚಿಕ್ಕಬಳ್ಳಾಪುರ: ಗ್ರಾಮದಲ್ಲಿರುವ ಸ್ಫೋಟಕ ಸಾಮಗ್ರಿಗಳ ಸಂಗ್ರಹಗಾರ ತೆರವುಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.
ಎಸ್ಎಫ್ಐ ಸಂಘಟನೆ ವತಿಯಿಂದ ತಾಲೂಕಿನ ಪುಟ್ಟಪರ್ತಿ ಗ್ರಾಮದಲ್ಲಿರುವ ಸ್ಫೋಟಕ ಸಾಮಗ್ರಿಗಳ ಸಂಗ್ರಹಗಾರ ತೆರವುಗೊಳಿಸುವಂತೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ತಹಶೀಲ್ದಾರ್ ಕಚೇರಿ ಕಟ್ಟಡದ ಮೇಲೇರಿದ ಯುವಕ ವೆಂಕಟೇಶ್, ತಮ್ಮ ಗ್ರಾಮದಲ್ಲಿರುವ ಸ್ಫೋಟಕ ಸಾಮಗ್ರಿಗಳ ಸಂಗ್ರಹಗಾರ ತೆರವುಗೊಳಿಸಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಘಟನೆಯಿಂದ ಕೆಲಕಾಲ ತಾಲೂಕು ಕಚೇರಿ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಓದಿ : ಸ್ಫೋಟ ಪ್ರಕರಣದಲ್ಲಿ ನಮ್ಮ ಮಾವನ ಮಕ್ಕಳು ಯಾರೂ ಇಲ್ಲ: ಸಚಿವ ಸುಧಾಕರ್ ಸ್ಪಷ್ಟನೆ
ಈ ವೇಳೆ ಆದಷ್ಟು ಬೇಗ ಸ್ಫೋಟಕ ಸಾಮಗ್ರಿಗಳ ಸಂಗ್ರಹಗಾರದ ರದ್ಧತಿಗೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿ ಮನವೊಲಿಸಿದ ಅಧಿಕಾರಿಗಳು, ವೆಂಕಟೇಶನನ್ನು ಕಟ್ಟಡದಿಂದ ಕೆಳಗಿಳಿಸಿದರು.
ಬಳಿಕ ಮಾತನಾಡಿದ ವೆಂಕಟೇಶ್, ಹಿರೇನಾಗವಲ್ಲಿ ಬಳಿ ಜಿಲೆಟಿನ್ ದುರಂತದಿಂದ ಆತಂಕಗೊಂಡಿದ್ದೇನೆ. ನಮ್ಮೂರಿನಲ್ಲೂ ಇಂತಹ ಘಟನೆ ಮರುಕಳಿಸಬಾರದು ಅಂತಾ ಈ ರೀತಿ ಮಾಡಿದ್ದೇನೆ ಎಂದಿದ್ದಾನೆ. ಸರ್ಕಾರ ಈ ಕೂಡಲೇ ಸ್ಫೋಟಕ ಸಾಮಾಗ್ರಿಗಳ ಸಂಗ್ರಹಗಾರದ ಅನುಮತಿ ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾನೆ.