ಚಿಕ್ಕಬಳ್ಳಾಪುರ : ಭವಿಷ್ಯಕ್ಕಾಗಿ ಒಂದಷ್ಟು ಇರಲಿ ಎಂದು ತಾವು ದುಡಿದ ಹಣದಲ್ಲಿ ಒಂದು ಭಾಗವನ್ನು ಚೀಟಿ ವ್ಯವಹಾರ ಮಾಡುವವರ ಬಳಿ ಹಣ ಕಟ್ಟಿದ್ದಾರೆ. ಆದರೀಗ ಚೀಟಿ ವ್ಯವಹಾರ ಮಾಡುವವರೇ ಗ್ರಾಹಕರಿಗೆ ಪಂಗನಾಮ ಹಾಕಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚೀಟಿ ವ್ಯವಹಾರದಲ್ಲಿ ಕೋಟ್ಯಂತರ ರೂ. ಹಣ ಕಟ್ಟಿದವರು 40ಕ್ಕೂ ಹೆಚ್ಚು ಜನರಿದ್ದಾರೆ. ಇವರಿಗೆಲ್ಲ ಮೋಸ ಮಾಡಿದ್ದಲ್ಲದೇ, ತಮ್ಮನ್ನು ಹಣ ಕೇಳಬಾರದು ಎಂದು ಕೋರ್ಟ್ನಿಂದ ನೋಟಿಸ್ ಜಾರಿ ಮಾಡಿಸಿದ್ದಾರಂತೆ ವಂಚಕರು.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪ್ರಶಾಂತ ನಗರದ ನಿವಾಸಿಯಾದ ಪುಷ್ಪಲತಾ ಮೋಸ ಮಾಡಿದವರು. ಇವರ ವಿರುದ್ಧ ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುಷ್ಪಲತಾ ಅವರು ಚೀಟಿ ವ್ಯವಹಾರ ನಡೆಸುತ್ತಿದ್ದರು. ಅದೇ ಕಾಲೋನಿಯ 40ಕ್ಕೂ ಅಧಿಕ ಜನರು ಇವರ ಬಳಿ ಚೀಟಿ ಕಟ್ಟಿದ್ದಾರೆ. ಚೀಟಿ ಕಟ್ಟಿಸಿಕೊಂಡಿದ್ದಲ್ಲದೇ ಅವರ ಬಳಿ ಸಾಲದ ರೂಪದಲ್ಲಿ ಹಣ ಪಡೆಯಲು ಜಾಮೀನು(ಮಧ್ಯಸ್ತಿಕೆ) ಹಾಕಿಸಿಕೊಂಡಿದ್ದಾರಂತೆ. ಇದೀಗ ಆ ಹಣವನ್ನು ವಾಪಸ್ ಕೇಳಲು ಹೋದಾಗ ಹಣ ನೀಡಲು ನಿರಾಕರಿಸಿದ್ದಾರೆ.
ಇದಲ್ಲದೇ ಒಂದು ಹೆಜ್ಜೆ ಮುಂದೆ ಹೋಗಿ ಹಣ ಕೇಳಬಾರದು ಎಂದು ಕೋರ್ಟ್ನಿಂದಲೇ ಚೀಟಿ ಕಟ್ಟಿದ ಗ್ರಾಹಕರಿಗೆ ನೋಟಿಸ್ ಜಾರಿ ಮಾಡಿಸಿದ್ದಾರೆ. ಅಲ್ಲದೇ, ಮನೆಯ ಬಳಿಗೆ ಬರುವ ಗ್ರಾಹಕರ ಮೇಲೆ ಹಲ್ಲೆ ಮಾಡಲಾಗುತ್ತಿದೆ ಎಂದು ನೊಂದವರು ಅಲವತ್ತುಕೊಂಡಿದ್ದಾರೆ. ಇದರಿಂದ ನೊಂದ ಗ್ರಾಹಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಓದಿ: ಶಾಲೆಗಳಿಗೆ ಬಾಂಬ್ ಬೆದರಿಕೆ.. ಇ-ಮೇಲ್ ಪೋರ್ಟಲ್ ವಿದೇಶದಲ್ಲಿರುವ ಕಾರಣ ಮಾಹಿತಿ ವಿಳಂಬ : ಪೊಲೀಸ್ ಆಯುಕ್ತ ಪಂತ್