ಚಿಕ್ಕಬಳ್ಳಾಪುರ: ತಾಯಿವೋರ್ವಳು ತನ್ನ ಎರಡು ತಿಂಗಳ ಹೆಣ್ಣು ಮಗುವನ್ನು ಆಸ್ಪತ್ರೆಯ ಆವಣರದಲ್ಲಿ ಬಿಟ್ಟು ಹೋಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತಾಯಿ, ಎರಡು ತಿಂಗಳ ಹೆಣ್ಣು ಮಗುವಿನ ಜೊತೆ ಆಗಮಿಸಿದ್ದಳು. ಮೆಡಿಕಲ್ ಶಾಪ್ ನಲ್ಲಿ ಮಾತ್ರೆ, ಸಿರಪ್ ತಗೊಂಡು ಬರಬೇಕೆಂದು ಹೇಳಿ ಆಸ್ಪತ್ರೆ ಆವರಣದಲ್ಲಿ ಮಗುವನ್ನು ಮಲಗಿಸಿ ಹೋದವಳು ಮರಳಿ ಬಂದಿಲ್ಲವಂತೆ.
ಈ ವೇಳೆ ಮಗುವಿನ ಚೀರಾಟ ಕೇಳಿ ಚಿಕಿತ್ಸೆಗೆ ಬಂದಿದ್ದ ರೋಗಿಗಳು, ಸಾರ್ವಜನಿಕರು ಅದರ ಪೋಷಕರ ಪತ್ತೆಗೆ ಪ್ರಯತ್ನ ನಡೆಸಿದರೂ ತಾಯಿ ಪತ್ತೆಯಾಗಲಿಲ್ಲ. ಕೊನೆಗೆ ಮಗುವನ್ನು ಆಸ್ಪತ್ರೆಯ ದಾದಿಯರು ಪಡೆದು ಆರೈಕೆ ಮಾಡುತ್ತಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.
ವಿಷಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗಮನಕ್ಕೆ ತಂದಿದ್ದು ವಿಚಾರ ತಿಳಿದ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತೊಂದಡೆ ಬಿಟ್ಟು ಹೋಗಿರುವ ಹೆಣ್ಣು ಮಗು ಪಡೆಯಲು ಹಲವರು ಆಸ್ಪತ್ರೆಗೆ ದಾಂಗುಡಿ ಇಟ್ಟಿದ್ದಾರೆ. ಮಗುವನ್ನು ತಮಗೆ ನೀಡಿ, ತಾವು ಸಾಕುತ್ತೇವೆ ಎಂದು ಆಸ್ಪತ್ರೆಯ ಸಿಬ್ಬಂದಿಯ ಬಳಿ ಕೇಳಿಕೊಂಡಿದ್ದಾರೆ.