ಚಿಕ್ಕಬಳ್ಳಾಪುರ : ಬರಪೀಡಿತ ಜಿಲ್ಲೆಯಲ್ಲಿ ಡ್ರ್ಯಾಗನ್ ಹಣ್ಣನ್ನು ಬೆಳೆದು ರೈತನೊಬ್ಬ ಸೈ ಎನಿಸಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ತಾಲೂಕಿನ ಹೊರವಲಯದಲ್ಲಿರುವ ಮರಳುಕುಂಟೆ ಗ್ರಾಮದ ರೈತ ನಾರಾಯಣಸ್ವಾಮಿ ಕೃಷಿಯಲ್ಲಿ ವಿಭಿನ್ನ ಆಲೋಚನೆಗಳ ಮೂಲಕ ಜಿಲ್ಲೆಯಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಿದ್ದಾರೆ.
ಈಗಾಗಲೇ ಸೇಬು ಹಣ್ಣನ್ನು ಬೆಳೆದು ಸೈ ಎನಿಸಿಕೊಂಡಿದ್ದ ರೈತ, ಈಗ ಡ್ರ್ಯಾಗನ್ ಹಣ್ಣನ್ನು ಫ್ರೂಟ್ ಬೆಳೆದು ಮತ್ತೆ ಸುದ್ದಿಯಾಗಿದ್ದಾರೆ.
ಮುಖ್ಯವಾಗಿ ಡ್ರ್ಯಾಗನ್ ಹಣ್ಣನ್ನು ಫ್ರೂಟ್ ಮೂಲತಃ ಲಾಟಿನ್ ಅಮೆರಿಕದಿಂದ ಬಂದಿದ್ದು, ಈ ಹಣ್ಣನ್ನು ವಿಯೆಟ್ನಾಮ್, ಮಲೇಷಿಯಾದಲ್ಲಿ ಹೆಚ್ಚು ಕಾಣಬಹುದಾಗಿದೆ. ಸದ್ಯ ಇದೇ ಹಣ್ಣು ನಮ್ಮ ರಾಜ್ಯದಲ್ಲಿ ಒಂದು ಕೆಜಿಗೆ 400ರಿಂದ 500 ರೂಪಾಯಿ ಮಾರಾಟವಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳೆದಂತಹ ಬೆಳೆ ಈಗ ದೊಡ್ಡ ದೊಡ್ಡ ಹೋಟೆಲ್‌ಗಳಿಗೆ ಮಾಲ್‌ಗಳಿಗೆ ಮಾರಾಟವಾಗುತ್ತಿದೆ.
ಈ ಹಣ್ಣು ಆರೋಗ್ಯಕ್ಕೆ ಬಹಳಷ್ಟು ಉತ್ತಮವಾಗಿದೆ. ಬಿಪಿ, ಶುಗರ್ ಹಾಗೂ ಹೆಚ್ಚು ಕೊಬ್ಬಿನ ಅಂಶ ಇರುವವರಿಗೆ ಸಾಕಷ್ಟು ಉಪಾಯಕಾರಿಯಾಗಲಿದೆ. ಅದರಲ್ಲೂ ಗರ್ಭಿಣಿಯರು ಈ ಹಣ್ಣನ್ನು ತಿಂದ್ರೆ ನಾರ್ಮಲ್ ಡೆಲಿವರಿ ಆಗುತ್ತದೆ ಎಂದು ಹೇಳಲಾಗುತ್ತಿದೆ. ಇದು ಸರಿ ಸುಮಾರು 12 ರಿಂದ 13 ರೀತಿಯ ಸಮಸ್ಯೆಗಳಿಗೆ ಉತ್ತಮ ಪ್ರಯೋಜನವನ್ನು ನೀಡುವ ಹಣ್ಣಾಗಿದೆ.
ಅಮೆರಿಕ, ವಿಯೆಟ್ನಾಂದಲ್ಲಿ ಹೆಚ್ಚಾಗಿ ಬೆಳೆಯುವ ಹಣ್ಣನ್ನು ರಪ್ತು ಮಾಡಿ, ನಮಗೆ ಸೇರುವಷ್ಟರಲ್ಲಿ ಹಣ್ಣು ಕೊಳೆತ ಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನೂ ಚಿಕ್ಕಬಳ್ಳಾಪುರದಲ್ಲಿ ಬೆಳೆದಿರುವಂತಹ ಹಣ್ಣಿಗೆ ಸಾಕಷ್ಟು ಬೇಡಿಕೆ ಇದೆ ಎಂದು ರೈತ ಸಂತಸ ವ್ಯಕ್ತಪಡಿಸಿದ್ದಾರೆ.