ಬಾಗೇಪಲ್ಲಿ: ಟಿ.ಬಿ. ಕ್ರಾಸ್, ಬಸ್‌ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಡಾ. ಎಚ್.ಎನ್. ವೃತ್ತ, ಗೂಳೂರು ರಸ್ತೆಗಿಳಿದ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸುತ್ತಿದ್ದ 60 ಆಟೋಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣಕ್ಕೆ ಕೂಗಳತೆ ದೂರದಲ್ಲಿ ಆಂಧ್ರಪ್ರದೇಶದ ಗಡಿ ಇದೆ. ಆಂಧ್ರದ ಕೊಡಿಕೊಂಡ, ಗೋರಂಟ್ಲ, ಚಿಲಮತ್ತೂರು, ಚೆಕ್‌ಪೋಸ್ಟ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ಆಟೋಗಳು ಸಂಚರಿಸುತ್ತವೆ. ಕೆಲವು ಗ್ರಾಮಗಳಿಗೆ ಬಸ್ ಸಂಚಾರ ಇಲ್ಲ. ಖಾಸಗಿ ಸರಕು ಸಾಗಣೆ ಆಟೊಗಳಲ್ಲಿಯೇ ಜನರು ಸಂಚರಿಸುತ್ತಾರೆ. ಜನರನ್ನು ನಿಗದಿತ ಸಂಖ್ಯೆಗಿಂತ ಹೆಚ್ಚಾಗಿ ತುಂಬಿಕೊಂಡು ಚಾಲಕರು ಆಟೋಗಳನ್ನು ಚಾಲನೆ ಮಾಡುತ್ತಿದ್ದಾರೆ.
ಇಂದು ಆಟೋಗಳನ್ನು ವಶಪಡಿಸಿಕೊಂಡ ಕಾರಣ ಜನರು ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ವಾಹನಗಳಲ್ಲಿ ತೆರಳಿದರು.
ದ್ವಿಚಕ್ರ, ತ್ರಿಚಕ್ರವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು. ಕಡ್ಡಾಯವಾಗಿ ಸಮವಸ್ತ್ರ ಹಾಕಬೇಕು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಬಾರದು ಎಂದು ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.