ಚಿಕ್ಕಬಳ್ಳಾಪುರ: ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ನಿರಾಸೆಗೊಂಡು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 45% ಸರ್ಕಾರ ಎಂಬ ಆರೋಪವನ್ನು ಮಾಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಸುಧಾಕರ್ ಟಾಂಗ್ ನೀಡಿದರು.
ಚಿಕ್ಕಬಳ್ಳಾಪುರದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಕಿಡಿಕಾರಿದ ಅವರು, ಚಿಕ್ಕಬಳ್ಳಾಪುರದಲ್ಲಿ ಅಕ್ರಮ ಕ್ರಷರ್‌ಗಳ ಹಾವಳಿ ಹೆಚ್ಚಾಗಿದ್ದು, ಈ ವಿಷಯದಲ್ಲಿ ಕಾನೂನು ಬಾಹಿರವಾಗಿ ನಡೆಸುತ್ತಿರುವ ಕ್ರಷರ್ಗಳನ್ನು ಸ್ಥಗಿತ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ರವಾನಿಸಿದರು.
ಇನ್ನು, ಈ ಹಿಂದೆ ಇದ್ದಂತಹ ಪರಿಸ್ಥಿತಿಗಳಿಗೆ ಅವಕಾಶ ಕೊಡುವುದಿಲ್ಲ. ಪ್ರತಿ ನಾಗರಿಕ, ಅಧಿಕಾರಿಗಳಿಗೂ ದೇಶದಲ್ಲಿ ಬದುಕುವ ಹಕ್ಕಿದೆ. ಆದರೆ ಕಾನೂನಿಗೆ ಅನುಗುಣವಾಗಿ ಬದುಕಲು ಅವಕಾಶ ಮಾಡಕೊಡುತ್ತೇವೆ ಎಂದು ಸಚಿವ ಸುಧಾಕರ್ ಹೇಳಿದರು.
ಗ್ಯಾರಂಟಿ ಅನುಷ್ಠಾನದಿಂದ ನಿರಾಸೆಗೊಂಡು ಕುಮಾರಸ್ವಾಮಿ ಆರೋಪ:ಇನ್ನು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ 45 ಪರ್ಸೆಂಟ್ ಸರ್ಕಾರ ಆರೋಪಕ್ಕೆ ಪ್ರತಿಕ್ರಿಯೆಸಿ, ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿರುವುದರಿಂದ ನಿರಾಸೆಗೊಂಡು ಕುಮಾರಸ್ವಾಮಿ ಅವರು ಈ ರೀತಿ ಹೇಳಿಕೆ ನೀಡಿರಬಹುದು. ಕುಮಾರಸ್ವಾಮಿ ಅವರು ಹಿರಿಯರು, ಅವರ ಬಗ್ಗೆ ಬಹಳಷ್ಟು ಗೌರವಿದೆ. ಸರ್ಕಾರ ರಚನೆಯಾಗಿ 15 ದಿನ ಕಳೆದಿಲ್ಲ. ಯಾವುದೇ ಇಲಾಖೆಗಳಲ್ಲಿ ವರ್ಗಾವಣೆ ಕಾರ್ಯಗಳು ನಡೆದಿಲ್ಲ. ಎಲ್ಲಿ ಪೋಸ್ಟಿಂಗ್ ಆಗಿದೆ, ಯಾವ ರೀತಿ ಆಗಿದೆ ಎನ್ನುವುದು ಗೊತ್ತಿಲ್ಲ. ಆದರೆ ಇಲಾಖೆಗಳಲ್ಲಿ ಅಧಿಕಾರಿಗಳ ವರ್ಗಾವಣೆಗೆ ಮಾಡಲು ಇಂದು ಅವಕಾಶ ಇದೆ. ಆದರೆ ನಮ್ಮ ಇಲಾಖೆಯಲ್ಲಿ ವರ್ಗಾವಣೆ ಅವಕಾಶ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ನಮ್ಮ ಇಲಾಖೆಗಳಲ್ಲಿ ಕೌನ್ಸೆಲಿಂಗ್ ವ್ಯವಸ್ಥೆ ಇದೆ. ಯಾವುದೇ ರೀತಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. ಜೆಡಿಎಸ್ ಪಕ್ಷ ಅಧಿಕಾರ ಕಳೆದುಕೊಂಡರಿಂದ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶದಿಂದ ಈ ರೀತಿ ಹೇಳಿಕೆಯನ್ನು ಹೆಚ್ಡಿಕೆ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರಿಗೆ ಒಳ್ಳೆಯದಾಗಲಿ, ಅವರ ಬಗ್ಗೆ ಗೌರವವಿದೆ. ಅವರು ಹೇಳುವ ಮಾತನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಆಡಳಿತ ನಡೆಸುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಪರ್ಸಂಟೇಜ್ ಫಿಕ್ಸ್: ಹೆಚ್ಡಿಕೆ ಆರೋಪ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದಿದ್ದ ಕಾಮಗಾರಿಗಳಿಗೆ ಎಲ್ಒಸಿ (LOC) ಕೊಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಪರ್ಸಂಟೇಜ್ ಫಿಕ್ಸ್ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಶನಿವಾರ ನೇರ ಆರೋಪ ಮಾಡಿದ್ದರು.
ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ಹಿಂದಿನ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್, ಈಗ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಮಾಡುತ್ತಿದೆ. ಹಿಂದಿನ ಸರ್ಕಾರದಲ್ಲಿ ಕೈಗೊಳ್ಳಲಾಗಿದ್ದ ಕಾಮಗಾರಿಗಳಿಗೆ LOC ಕೊಡುವುದಕ್ಕೆ ಈ ಸರ್ಕಾರದಲ್ಲಿ 5% ಫಿಕ್ಸ್ ಮಾಡಿದ್ದಾರೆ. ಇಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.