ಚಿಕ್ಕಬಳ್ಳಾಪುರ: ಸ್ವಚ್ಚ ಭಾರತ ಮಿಷನ್ ಯೋಜನೆಯಡಿ 199 ಫಲಾನುಭವಿಗಳಿಗೆ ಎಲ್ಲೋಡು ಪಿಕೆಜಿಬಿ ಬ್ಯಾಂಕ್‍ನಿಂದ 26.80 ಲಕ್ಷ ಬ್ರಿಡ್ಜ್ ಲೋನ್ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾ.ಪಂ. ನ ಪಿಡಿಒ, ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಒಟ್ಟು 9 ಜನರ ವಿರುದ್ದ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ:
ತಾಲ್ಲೂಕಿನ ಎಲ್ಲೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ 199 ಫಲಾನುಭವಿಗಳಿಗೆ ಸ್ವಚ್ಚ ಭಾರತ ಮಿಷನ್ ಯೋಜನೆಯಡಿ ಶೌಚಾಲಯಗಳನ್ನು ಮಂಜೂರು ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಎಲ್ಲೋಡು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‍ನಿಂದ 26.80 ಲಕ್ಷ ಬ್ರಿಡ್ಜ್ ಲೋನ್ ಹಣವನ್ನು ನವೆಂಬರ್ 7, 2017 ರಂದು ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಮುಖಂಡರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗಿತ್ತು. ಆದರೆ ಬ್ಯಾಂಕಿನಿಂದ ಹಣ ಪಡೆದವರು ಇಲ್ಲಿಯವರೆಗೂ ಮರುಪಾವತಿ ಮಾಡದ ಕಾರಣ ಬ್ಯಾಂಕ್ ಅಧಿಕಾರಿಗಳು ಜಿಲ್ಲಾ ಪಂಚಾಯತಿ ಸಿಇಒ ರವರಿಗೆ ದೂರು ನೀಡಿದ್ದರು.
ಈ ಹಿನ್ನೆಲೆ ಜಿ.ಪಂ ಸಿಇಒ ರವರು ತನಿಖಾ ತಂಡವನ್ನು ನೇಮಿಸಿ ಜನವರಿ ತಿಂಗಳಲ್ಲಿಯೇ ವರದಿ ಪಡೆದಿದ್ದರು. ನಂತರ ಹಣ ದುರುಪಯೋಗವಾಗಿರುವ ಬಗ್ಗೆ ದೃಡಪಟ್ಟಿದೆ. ಈ ಆಧಾರದ ಮೇಲೆ ಗುಡಿಬಂಡೆ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಪೂರ್ಣವಾದ ಶೌಚಾಲಯಗಳು:
ಬ್ರಿಡ್ಜ್ ಲೋನ್ ಹಣ ದುರುಪಯೋಗವಾದ ಹಿನ್ನೆಲೆಯಲ್ಲಿ 199 ಫಲಾನುಭವಿಗಳ ಪೈಕಿ ಕೇವಲ 34 ಶೌಚಾಲಯಗಳು ಪೂರ್ಣಗೊಂಡಿದ್ದು, ಉಳಿದ 165 ಶೌಚಾಲಯಗಳು ಅಪೂರ್ಣವಾಗಿವೆ. ಶೌಚಾಲಯಗಳಿಗೆ ಬಳಸಿಕೊಳ್ಳಬೇಕಾದ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿಂದ ಬಿಡುಗಡೆಯಾಗಬೇಕಿದ್ದ ಅನುದಾನ ಬಿಡುಗಡೆಯಾಗಿಲ್ಲ. ಈ ಕಾರಣಕ್ಕೆ ಶೌಚಾಲಯಗಳ ನಿರ್ಮಾಣಕ್ಕೆ ಹಣ ಪಡೆದಿದ್ದ ಎಲ್ಲೋಡು ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳು ಹಣ ಪಾವತಿ ಮಾಡಿಲ್ಲ ಎನ್ನಲಾಗಿದೆ.
ಹಣ ಜಮೆಯಾದ ವಿವರ:
ಈ ಪ್ರಕರಣದ ಬಗ್ಗೆ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇಮಿಸಿದ್ದ ತನಿಖಾ ತಂಡದ ವರದಿಯಂತೆ ಎಲ್ಲೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬುಳ್ಳಸಂದ್ರ ಬ್ರಹ್ಮಾನಂದರೆಡ್ಡಿ ಖಾತೆಗೆ 5,38,800 ರೂ. ಉಪಾಧ್ಯಕ್ಷೆ ಯರ್ರಹಳ್ಳಿ ಶಿವಮ್ಮ ಖಾತೆಗೆ .4,82,000 ರೂ., ಸದಸ್ಯರಾದ ಗುಂಡ್ಲಹಳ್ಳಿ ನಾಗರಾಜರೆಡ್ಡಿ ಖಾತೆಗೆ ರೂ.2,98,900, ನರಸಾಪುರ ನಾರಾಯಣಪ್ಪ ರೂ.3,43,300, ಸದಸ್ಯರ ಪತಿ ನುಲಿಗುಂಬ ರವೀಂದ್ರರೆಡ್ಡಿ ಖಾತೆಗೆ ರೂ.1,92,500, ಮುಖಂಡರಾದ ಗುಂಡ್ಲಹಳ್ಳಿ ಮಂಜುನಾಥರೆಡ್ಡಿ ಖಾತೆಗೆ ರೂ.2,01,000, ಯರ್ರಹಳ್ಳಿ ಎನ್.ಆರ್.ನಾರಾಯಣಸ್ವಾಮಿ ಖಾತೆಗೆ ರೂ.2,34,000, ಎಲ್ಲೋಡು ಅಶ್ವತ್ಥರೆಡ್ಡಿ ಖಾತೆಗೆ 3,90,000 ರೂ. ಮತ್ತು ಹಿಂದಿನ ಪಿಡಿಒ ಮಲ್ಲಿಕಾರ್ಜುನ ಸ್ವಾಮಿ, ಎಲ್ಲೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷೆ, ಸದಸ್ಯರ ಹಾಗೂ ಮುಖಂಡರ ಬ್ಯಾಂಕ್ ಖಾತೆಗಳಿಗೆ ಒಟ್ಟು 26,80,500 ರೂ.ಗಳನ್ನು ಪ್ರೋತ್ಸಾಹ ಧನ ಪಿಕೆಜಿಬಿ ಬ್ಯಾಂಕಿನಿಂದ ಈ ಮೇಲಿನವರ ಖಾತೆಗಳಿಗೆ ಜಮೆಯಾಗಿದೆ.
ಇನ್ನೂ ಸರ್ಕಾರದ ಮಹತ್ತರ ಯೋಜನೆಯಾದ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಫಲಾನುಭವಿಗಳಿಗೆ ಸೇರಬೇಕಾದ ಪ್ರೋತ್ಸಾಹಧನ ಬಿಡುಗಡೆ ಮಾಡದೇ ಪಿಡಿಒ ಸೇರಿದಂತೆ ಅಧ್ಯಕ್ಷರು ಸಂಪೂರ್ಣವಾಗಿ ವಿಫಲರಾಗಿದ್ದು, ಸರ್ಕಾರದ ಯೋಜನೆಗೆ ಎಳ್ಳುನೀರು ಬಿಟ್ಟಿದ್ದಾರೆ ಎನ್ನಬಹುದು. ಆದ್ದರಿಂದ ಹಿಂದಿನ ಪಿಡಿಒ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ 9 ಜನರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, 9 ಜನ ದುರುಪಯೋಗ ಮಾಡಿಕೊಂಡ ಹಣವನ್ನು ಕೋರ್ಟ್ ಮೂಲಕ ಬ್ಯಾಂಕಿಗೆ ಮರುಪಾವತಿ ಮಾಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಗುಡಿಬಂಡೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.