ಚಾಮರಾಜನಗರ: ದಂಡ ಕಟ್ಟಿದ್ದರು ಕೂಡ ಬೈಕ್ ಕೀ ಕೊಡಲು ಒಂದೂವರೆ ಗಂಟೆ ಕೊಳ್ಳೇಗಾಲ ಪೊಲೀಸರು ನನ್ನನ್ನು ಸತಾಯಿಸಿದರೆಂದು ಆರೋಪಿಸಿ ಯುವಕನೋರ್ವ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾನೆ.
ಕೊಳ್ಳೇಗಾಲ ಪಟ್ಟಣದ ಸಂದೇಶ್ ಎಂಬಾತ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರಿಗೆ ವಾಟ್ಸಾಪ್ ಮೂಲಕ ಅಳಲು ತೋಡಿಕೊಂಡು ಪೊಲೀಸರ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾನೆ.
ಕಳೆದ ಸೆ.28 ರಂದು ಬೈಕ್ನಲ್ಲಿ ತಂದೆಯನ್ನು ಕರೆತರಲು ತೆರಳುತ್ತಿರಬೇಕಾದರೆ ಹೆಲ್ಮೆಟ್ ಧರಿಸದ್ದರಿಂದ ಪೊಲೀಸರು ಬೈಕ್ ಹಿಡಿದು ಕೀ ಕಿತ್ತುಕೊಂಡಿದ್ದರು. ಜೇಬಿನಲ್ಲಿ ಹಣ ಇಲ್ಲದ್ದರಿಂದ ದಂಡ ಪಾವತಿಸಿದರೂ ಬೈಕ್ ಕೀ ಕೊಡಲು ಸತಾಯಿಸಿ, ಒಂದೂವರೆ ತಾಸು ಕಾಯಿಸಿದ್ದಾರೆ. ನನ್ನ ಸಮಯ ವ್ಯರ್ಥ ಮಾಡಿದ್ದಾರೆ ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ.
ಸರ್ಕಾರದ ಸಮಯ ವ್ಯರ್ಥ ಮಾಡಿದರೆ ಜನರಿಗೆ ದಂಡ ವಿಧಿಸುತ್ತಾರೆ. ಆದರೆ, ಅನಾವಶ್ಯಕವಾಗಿ ಜನರ ಸಮಯವನ್ನು ಅಧಿಕಾರಿಗಳು ವ್ಯರ್ಥ ಮಾಡಿದರೆ ಯಾರು ಹೊಣೆ?, ಪೊಲೀಸರನ್ನು ಜನ ಸ್ನೇಹಿಯನ್ನಾಗಿ ಮಾಡಿ ಎಂದು ಮನವಿ ಮಾಡಿದ್ದಾನೆ.