ಚಾಮರಾಜನಗರ: ಸಾರಿಗೆ ಸಂಸ್ಥೆ ಬಸ್ ಸ್ವಚ್ಚಗೊಳಿಸುತ್ತಿದ್ದ ವೇಳೆ ಮತ್ತೊಂದು ಬಸ್ ಡಿಕ್ಕಿಯಾಗಿ ದಿನಗೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಕೊಳ್ಳೇಗಾಲದ ಕೆಎಸ್ಆರ್ಸಿ ಡಿಪೋದಲ್ಲಿ ನಡೆದಿದೆ.
ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಗ್ರಾಮದ ಚಿಕ್ಕಮಾರಯ್ಯರವರ ಮಗ ಶಿವಣ್ಣ (35) ಮೃತ ದುರ್ದೈವಿ. ಈತ ಬಸ್‍ನ ಸ್ವಚ್ಚತೆಯಲ್ಲಿ ತೊಡಗಿದ್ದಾಗ ಮೆಕ್ಯಾನಿಕ್ ರಾಜಶೇಖರ ಮೂರ್ತಿ ಎಂಬಾತ ಬ್ರೇಕ್‌ಫೇಲ್ ಆಗಿದ್ದ ಬಸ್ ಚಲಾಯಿಸಿ ಶಿವಣ್ಣ ಸ್ವಚ್ಛ ಮಾಡುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಎರಡು ಬಸ್ ಗಳ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಶಿವಣ್ಣನ್ನು ಆಸ್ಪತ್ರೆಗೆ ಸೇರಿಸಿದರಾದರು ಚಿಕಿತ್ಸೆಗೂ ಮುನ್ನವೇ ಆತ ಅಸುನೀಗಿದ್ದಾನೆ. ಇನ್ನು, ಬಸ್ ಚಲಾಯಿಸಿದ ರಾಜಶೇಖರ ಮೂರ್ತಿಯನ್ನು ಕೊಳ್ಳೇಗಾಲ ಸಿಪಿಐ ಶ್ರೀಕಾಂತ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆಸ್ಪತ್ರೆಗೆ ಹನೂರು ಶಾಸಕ ಆರ್. ನರೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಖಾಯಂ ನೌಕರರಿಗೆ ಸಿಗಬೇಕಾದ ಸವಲತ್ತನ್ನು ಮೃತ ಶಿವಣ್ಣನಿಗೂ ದೊರಕಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.