ಚಾಮರಾಜನಗರ: ವೇತನ ಮತ್ತು ಸಾಮಾಜಿಕ ಭದ್ರತೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘ, ಸಿಐಟಿಯುಸಿ, ಜೆಸಿಟಿಯು, ಆಶಾ ಕಾರ್ಯಕರ್ತೆಯರ ಸಂಘವೂ ಸೇರಿದಂತೆ ನೂರಾರು ಕಾರ್ಯಕರ್ತೆಯರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಸಾವಿರಾರು ಮಂದಿ ಮೆರವಣಿಗೆ ಮೂಲಕ ತಾಲೂಕು ಕಚೇರಿವರೆಗೆ ತೆರಳಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜಕೀಯ ಪ್ರೇರಿತವಾಗಿ ಬಂದ್ಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ ಎಂಬ ಸಚಿವ ಸುರೇಶ್‌ಕುಮಾರ್ ಹೇಳಿಕೆಗೆ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ರಾಜಕೀಯ ಕಾರಣಕ್ಕೆ ನಾವು ಪ್ರತಿಭಟಿಸುತ್ತಿಲ್ಲ. ಅವರ ಹೇಳಿಕೆಯನ್ನು ವಾಪಸ್ ಪಡೆದು ನಮ್ಮ ಅಹವಾಲು ಆಲಿಸಬೇಕು ಎಂದು ಒತ್ತಾಯಿಸಿದರು.
ಸಚಿವರು ರಾಜಕೀಯ ಹೇಳಿಕೆಯನ್ನು ನೀಡುವ ಬದಲು ಕನಿಷ್ಠ ವೇತನ ಜಾರಿಗೊಳಿಸಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ತಾಲೂಕು ಕಚೇರಿಯಲ್ಲಿ ಕೆಲಕಾಲ ಧರಣಿ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.