ಕೊಳ್ಳೇಗಾಲ: ಕೋವಿಡ್ನಿಂದಾಗಿ ಉದ್ಯೋಗ ಕಳೆದುಕೊಂಡು, ಜೀವನ ಜರ್ಜರಿತವಾಗಿ ತುತ್ತು ಅನ್ನಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ ಉಂಟಾಗಿದೆ. ಆದರೆ ಇಂತಹ ಸಂದರ್ಭದಲ್ಲಿಯೂ ಸಾಲ ಸೌಲಭ್ಯ ನೀಡುವ ಕೆಲ ಹಣಕಾಸು ಸಂಸ್ಥೆಗಳು ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಹಣ ವಸೂಲಿಗೆ ಇಳಿಯುತ್ತಿರುವುದು ಕಂಡು ಬರುತ್ತಿದೆ.
ಈ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದ ಬಡ ಮಹಿಳೆಯರ ಸ್ಥಿತಿ ಈಗ ಚಿಂತಾಜನಕವಾಗಿದೆ. ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೂ ಸಾಲ ವಸೂಲಿಗಾಗಿ ಜನರನ್ನು ಪೀಡಿಸಬಾರದು ಎಂದು ಸರ್ಕಾರ ಸಾಲ ಸೌಲಭ್ಯ ನೀಡಿರುವ ಕಂಪನಿಗಳಿಗೆ ಆದೇಶ ನೀಡಿದೆ. ಆದರೆ ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್ ಎನ್ನುವ ಎಲ್ ಆ್ಯಂಡ್ ಟಿ ಯಂತಹ ಹಣಕಾಸು ಸಂಸ್ಥೆಗಳು ಪ್ರತಿನಿತ್ಯ ಸಾಲ ಪಡೆದ ಜನರ ಮೇಲೆ ಇನ್ನಿಲ್ಲದ ದಬ್ಬಾಳಿಕೆ ನಡೆಸುತ್ತಿವೆ ಎಂದು ಮಹಿಳಾ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ 'ಈಟಿವಿ ಭಾರತ'ಕ್ಕೆ ದೂರವಾಣಿ ಕರೆಯ ಮೂಲಕ ಮಾತನಾಡಿದ ರಾಜಮ್ಮ ಎಂಬುವರು, ಕೊರೊನಾದಿಂದಾಗಿ ನಮ್ಮ ಜೀವನ ದುಸ್ತರವಾಗಿದೆ. ದಿನದ ಅಗತ್ಯ ವಸ್ತುಗಳನ್ನು ಖರೀದಿಸಿ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟವಾಗಿರುವ ಪರಿಸ್ಥಿತಿಯಲ್ಲಿ ಎಲ್ ಆ್ಯಂಡ್ ಟಿ ಕಿರು ಸಾಲ ಸಂಸ್ಥೆಯ ಸಿಬ್ಬಂದಿಯು ಮನೆ ಹತ್ತಿರ ಬಂದು ತೆಗೆದುಕೊಂಡ ಸಾಲ ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ. ಕೆಲಸವಿಲ್ಲದ ಕಾರಣ ನಮಗೆ ಹಣ ಕಟ್ಟಲು ಸಾಧ್ಯವಿಲ್ಲ. ಸಾಲ ವಸೂಲಿ ಮಾಡಬಾರದು ಎಂದು ಕೇಂದ್ರ ಸರ್ಕಾರ ಆದೇಶ ಮಾಡಿದೆಯಲ್ಲ ಎಂದು ಕೇಳಿದರೆ, ಬಾಯಿಗೆ ಬಂದ ಹಾಗೆ ಮಾತನಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಈಗಲೇ ಹಣ ಕೊಡಿ ಎಂದು ಮನೆ ಮುಂದೆ ಕುಳಿತುಕೊಂಡು ಅವಮಾನ ಮಾಡುತ್ತಾರೆ ಎಂದು ದುಃಖದಿಂದ ಹೇಳಿದರು.
ಕೊಳ್ಳೇಗಾಲ ಪಟ್ಟಣದ ಭೀಮನಗರದ ಪಾಲ್ ಚಾವಡಿ ಬೀದಿಯಲ್ಲಿ ಈ ಘಟನೆ ನಡೆದಿದ್ದು, ಸಾಲ ಮರುಪಾವತಿಗೆ ಬಂದಿದ್ದ ಎಲ್ ಆ್ಯಂಡ್ ಟಿ ಕಿರು ಸಾಲ ಸಂಸ್ಥೆಯ ಸಿಬ್ಬಂದಿಯ ವಿರುದ್ಧ ಮಹಿಳೆಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.