ಚಾಮರಾಜನಗರ: ಶೌಚಾಲಯಕ್ಕೆ ಹೋಗಬೇಕೆಂದು ಹೇಳಿ ವೃದ್ಧೆಗೆ ಮಗು ಕೊಟ್ಟು ಮಹಿಳೆ ಪರಾರಿಯಾಗಿರುವ ಘಟನೆ ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಇಂದು ನಡೆದಿದೆ. ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ ಕಲಿಗೌಡನಹಳ್ಳಿ ಗ್ರಾಮದ ಮಹಾದೇವಮ್ಮ ಎಂಬವರ ಬಳಿ ಬಂದ ಅಪರಿಚಿತ ಮಹಿಳೆ ತಾನು ಶೌಚಾಲಯಕ್ಕೆ ಹೋಗಿ ಬರುತ್ತೇನೆ, ಮಗು ನೋಡಿಕೊಳ್ಳಿ ಎಂದು ತಿಳಿಸಿ ಮಗು ಕೊಟ್ಟು ವಾಪಸ್ ಬರದೇ ಪರಾರಿಯಾಗಿದ್ದಾಳೆ. ಹೆಣ್ಣು ಮಗುವಾಗಿದ್ದು ಅಂದಾಜು 10 ತಿಂಗಳಿನಿಂದ ಒಂದೂವರೆ ವರ್ಷಗಳಾಗಿದೆ ಎಂದು ತಿಳಿದುಬಂದಿದೆ. ಗುಂಡ್ಲುಪೇಟೆ ಠಾಣೆ ಪೊಲೀಸರು ಮಗುವನ್ನು ಸಿಡಬ್ಲೂಸಿ ಸುಪರ್ದಿಗೆ ವಹಿಸಿದ್ದು, ಪರಾರಿಯಾದ ಮಹಿಳೆ ಪತ್ತೆಗೆ ಮುಂದಾಗಿದ್ದಾರೆ.
ಸರಗಳವು- ಮಹಿಳೆ ಕಿವಿಗೆ ಗಾಯ: ಬೈಕಿನಲ್ಲಿ ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿ ಬಂದ ಮುಸುಕುಧಾರಿಗಳು ಮಹಿಳೆಯೊಬ್ಬರ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ವೀರನಪುರ-ಹೆಗ್ಗಡಹಳ್ಳಿ ಸಂಪರ್ಕ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ವೀರನಪುರ ಗ್ರಾಮದ ನಾಗಮ್ಮ ಸರ ಕಳೆದುಕೊಂಡವರು. ನಾಗಮ್ಮ ಮತ್ತು ಶಿವಮಲ್ಲಪ್ಪ ದಂಪತಿ ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ ಊರಿಗೆ ವಾಪಸಾಗುತ್ತಿದ್ದರು. ಈ ವೇಳೆ ಬೈಕ್‍ನಲ್ಲಿ ಬಂದ ಮುಸುಕುಧಾರಿಗಳು ನಾಗಮ್ಮ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ.
ಸರ ಕಿತ್ತ ರಭಸಕ್ಕೆ ನಾಗಮ್ಮನವರ ಬಲಗಿವಿ ಹಾಗೂ ಕತ್ತಿನ ಭಾಗದಲ್ಲಿ ಗಾಯಗಳಾಗಿದೆ. ರಸ್ತೆಯಲ್ಲಿ ಜನರ ಓಡಾಟ ಕಡಿಮೆಯಿದ್ದ ಕಾರಣ ದಂಪತಿ ಕೂಗಿದರೂ ಪ್ರಯೋಜನವಾಗಿಲ್ಲ. ನಂತರ ಗ್ರಾಮಕ್ಕೆ ತೆರಳಿ ವಿಷಯ ಮುಟ್ಟಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಪೊಲೀಸ್ ಸೋಗಿನಲ್ಲಿ ಉದ್ಯಮಿ ಮನೆ ದರೋಡೆ: ಮಾಜಿ ಚಾಲಕ ಸೇರಿ 10ಕ್ಕೂ ಹೆಚ್ಚು ಆರೋಪಿಗಳು ಸೆರೆ