ಚಾಮರಾಜನಗರ: ಇದೇ ಮೊದಲ ಬಾರಿಗೆ ತೋಳ ಕಾಣಿಸಿಕೊಳ್ಳುವ ಮೂಲಕ ಪರಿಸರ ಪ್ರೇಮಿಗಳ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಕಾವೇರಿ ವನ್ಯಜೀವಿಧಾಮದ ಕೊತ್ತನೂರು ವಲಯದಲ್ಲಿ ಏ. 7 ರ ಮುಂಜಾನೆ ಗಂಡು ತೋಳ ನಡೆದುಕೊಂಡು ಹೋಗುತ್ತಿರುವ ಅಪರೂಪದ ಚಿತ್ರ ದಾಖಲಾಗಿದೆ.
ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳು, ಬಿಳಿಗಿರಿ ರಂಗನಬೆಟ್ಟ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹಿಂದೆ ಕೈಗೊಂಡ ಯಾವುದೇ ಅಧ್ಯಯನಗಳಲ್ಲೂ ತೋಳಗಳು ಕಂಡುಬಂದಿರಲಿಲ್ಲ. ಈ ದಾಖಲೆಯೊಡನೆ, ದಕ್ಷಿಣ ಭಾರತದಲ್ಲಿ ನಾಯಿ ಜಾತಿಗೆ ಸೇರಿರುವ ಎಲ್ಲಾ ನಾಲ್ಕು ಪ್ರಭೇದಗಳ (ಸೀಳು ನಾಯಿ, ತೋಳ, ಗುಳ್ಳೆ ನರಿ, ಮತ್ತು ಕಪ್ಪಲು ನರಿ) ವನ್ಯಜೀವಿಗಳು ಈಗ ಚಾಮರಾಜನಗರ ಜಿಲ್ಲೆಯಲ್ಲಿ ದಾಖಲಾದಂತಾಗಿದೆ. ಇದರೊಟ್ಟಿಗೆ, ತೋಳ, ಸೀಳುನಾಯಿ ಹಾಗೂ ಹುಲಿಗಳು ಒಂದೇ ಪ್ರದೇಶದಲ್ಲಿ ಕಂಡುಬಂದಿರುವುದು ಚಾಮರಾಜನಗರ ಜಿಲ್ಲೆಯಲ್ಲೇ ಎಂದು ಅವರು ಸಂತಸ ಹಂಚಿಕೊಂಡರು.
ಇನ್ನು, ಸಂಜಯ್ ಗುಬ್ಬಿ ಚಿರತೆಗಳ ಕುರಿತು ನಡೆಸುತ್ತಿರುವ ಅಧ್ಯಯನದಿಂದ ಇನ್ನಿತರ ಹಲವಾರು ವನ್ಯಜೀವಿಗಳ ಬಗ್ಗೆ ಮಹತ್ವವಾದ ಮಾಹಿತಿಗಳು ದೊರಕುತ್ತಿವೆ. ಈ ಹಿಂದೆ, 2014ರಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಕರಡಿಯನ್ನು ಕಾವೇರಿ ವನ್ಯಜೀವಿಧಾಮದಲ್ಲಿ ದಾಖಲಿಸಿದ್ದಾರೆ. 2015ರಲ್ಲಿ ಹುಲ್ಲೆಕರಗಳ ಇರುವಿಕೆಯನ್ನು ತುಮಕೂರು ಜಿಲ್ಲೆಯಲ್ಲಿ ದಾಖಲಿಸಿದ್ದರಿಂದ ಆ ಪ್ರದೇಶವನ್ನು ಸರ್ಕಾರವು ಬುಕ್ಕಾಪಟ್ಟಣ ಚಿಂಕಾರಾ ವನ್ಯ ಜೀವಿಧಾಮವೆಂದು ಘೋಷಿಸಿತು. ಈ ದಾಖಲೆ, ದಕ್ಷಿಣ ಭಾರತದಲ್ಲಿ ಹುಲ್ಲೆಕರಗಳು ಸಿಗುವ ಮಿತಿಯನ್ನು ವಿಸ್ತರಿಸಿತು. ಕರ್ನಾಟಕದಲ್ಲಿ ವಿರಾಜಪೇಟೆ ತಾಲ್ಲೂಕಿನಲ್ಲಿ ಬಿಟ್ಟರೆ ಇನ್ನೆಲ್ಲೂ ದಾಖಲಾಗದಿದ್ದ ಕಂದು ಮುಂಗಸಿಯನ್ನು 2018ರಲ್ಲಿ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದಾಖಲಿಸಿ, ಇದರ ಈಶಾನ್ಯ ಮಿತಿ ವಿಸ್ತರಿಸಲಾಗಿದೆ.