ಚಾಮರಾಜನಗರ: ಸಿಎಂ ಬಿ.ಎಸ್.ಯಡಿಯೂರಪ್ಪ ಶೀಘ್ರ ಚಾಮರಾಜನಗರಕ್ಕೆ ಬಂದು ಜಿಲ್ಲಾ ಕೇಂದ್ರದಲ್ಲಿ ಸಂಪುಟ ಸಭೆ ನಡೆಸದಿದ್ದರೆ, ಪ್ರಮಾಣವಚನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಅವರ ವಿರುದ್ದ ನ್ಯಾಯಾಲಯದ ಮೊರೆ ಹೋಗುತ್ತೇನೆಂದು ಚಳವಳಿಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಕೇಂದ್ರಕ್ಕೆ ಮುಖ್ಯಮಂತ್ರಿ ಭೇಟಿ ನೀಡುವಂತೆ ಒತ್ತಾಯಿಸಿ ಬಸ್ ಮುಂದೆ ನಿಂತು ಪ್ರತಿಭಟನೆ ನಡೆಸಿ ಅವರು ಮಾತನಾಡಿ, ಯಡಿಯೂರಪ್ಪ ಅವರು ಹೆಲಿಕಾಪ್ಟರ್‌ನಲ್ಲಿ ಶಿವಮೊಗ್ಗ, ಇತರ ಕಡೆ ಪ್ರವಾಸ ಮಾಡುತ್ತಾರೆ. ರಾಜ್ಯಪಾಲರ ಮುಂದೆ ಮಂಡಿಸಿದ ಪ್ರಮಾಣವಚನಕ್ಕೆ ವಿರುದ್ದವಾಗಿ ಅಭಿವೃದ್ದಿಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕದ ಗಡಿಯಲ್ಲಿರುವ ಚಾಮರಾಜನಗರ ಜಿಲ್ಲಾಕೇಂದ್ರ ಯಾರಿಗೂ ಬೇಡವಾಗಿದೆ. ಜಿಲ್ಲೆ ಎಂದ ಮೇಲೆ ಅಧಿಕಾರಿಗಳು ಇಲ್ಲೇ ಇರಬೇಕು. ಪವಿತ್ರವಾದ ಚಾಮರಾಜನಗರ ಜಿಲ್ಲೆಗೆ ಯಡಿಯೂರಪ್ಪ ಬಂದಿಲ್ಲ. ಪಕ್ಷಾತೀತವಾಗಿ, ಅನಾಚಾರವಾಗಿ, ಶಾಸಕರನ್ನು ದಾರಿ ತಪ್ಪಿಸಿ ಅಧಿಕಾರ ಹಿಡಿದಿರುವ ಯಡಿಯೂರಪ್ಪ ಚಾಮರಾಜನಗರಕ್ಕೆ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು.
ಚಾಮರಾಜನಗರ ಅಭಿವೃದ್ದಿಪಡಿಸುವಲ್ಲಿ ಮುಖ್ಯಮಂತ್ರಿಗಳು ತಾರತಮ್ಯ ಮಾಡುತ್ತಿರುವುದರಿಂಸ ಚಾಮರಾಜನಗರವನ್ನು ಪ್ರತ್ಯೇಕ ರಾಜ್ಯ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಯಾವುದೋ ಗೊಡ್ಡು ಅಂಜಿಕೆಗೆ ಮಾರುಹೋಗಿ ಯಡಿಯೂರಪ್ಪ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಬರದಿರುವುದು ಒಂದು ದೊಡ್ಡ ದುರಂತವಾಗಿದೆ ಎಂದರು.
ಗ್ರಾಪಂ ಜನಪ್ರತಿನಿಧಿಗಳಿಗೆ ಕನಿಷ್ಠ 10 ಸಾವಿರ, ಉಪಾಧ್ಯಕ್ಷರಿಗೆ 15 ಸಾವಿರ, ಅಧ್ಯಕ್ಷರಿಗೆ 20 ಸಾವಿರ ವೇತನ ನೀಡುವಂತೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಇದೇ ವೇಳೆ ಹೇಳಿದರು.