ಚಾಮರಾಜನಗರ: ಮೈತ್ರಿ ಸರ್ಕಾರದ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೇಲೆ ಜಿಲ್ಲೆಯ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಿದ್ದರಾಮಯ್ಯ ಜಿಲ್ಲೆಗೆ ಭರಪೂರ ಯೋಜನೆಗಳನ್ನು ನೀಡಿದ್ದರು. ಈ ಬಾರಿಯೂ ಉತ್ತಮ ಬಜೆಟ್ನ ನಿರೀಕ್ಷೆಯಲ್ಲಿದ್ದು, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ವಿಶೇಷ ಯೋಜನೆ ಮತ್ತು ಅನುದಾನ ಕೊಡುವ ನಿರೀಕ್ಷೆ ಇದೆ.
ಈ ಬಾರಿಯ ಬಜೆಟ್ನಲ್ಲಿ ಕೃಷಿ, ಶಿಕ್ಷಣ ಮತ್ತು ಅರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ನಿರೀಕ್ಷೆಯಿದ್ದು, ರೈತರಿಗೆ ಬೆಂಬಲ ಬೆಲೆ, ಶಿಥಿಲಾವಸ್ಥೆಯ ಶಾಲಾ ಕಟ್ಟಡಗಳನ್ನು ಸರಿಪಡಿಸುವುದು, ನೂತನ ಕೊಠಡಿಗಳ ನಿರ್ಮಾಣ, ತಾಲೂಕು ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಯೋಜನೆ ಪ್ರಕಟಿಸುವ ನಿರೀಕ್ಷೆ ಇದೆ.
ಹುದಿನಗಳಿಂದ ಜಿಲ್ಲೆಯ ಗಡಿ ಭಾಗದಲ್ಲಿ ಕನ್ನಡ ಭವನ ನಿರ್ಮಿಸಬೇಕೆಂಬ ಬೇಡಿಕೆ ಈ ಬಾರಿಯಾದರೂ ಈಡೇರುವ ನಿರೀಕ್ಷೆ ಹೊಂದಿದ್ದೇವೆ. ಎರಡನೇ ಹಂತದ ಕಬಿನಿ ಕುಡಿಯುವ ನೀರು ಯೋಜನೆ ಮತ್ತು ಅರಿಶಿಣಪುಡಿ ತಯಾರಿಕಾ ಘಟಕ ಮತ್ತು ಟೊಮ್ಯಾಟೊ, ಬಾಳೆ ಸಂಸ್ಕರಣ ಘಟಕ, ಜೊತೆಗೆ ಹಣ್ಣು-ತರಕಾರಿ ಸಾಗಾಟಕ್ಕೆ ಗ್ರೀನ್ ವೆಹಿಕಲ್ ಮತ್ತು ಕೋಲ್ಡ್ ಸ್ಟೋರೇಜ್ ದೊರಕಿಸಿಕೊಡಬೇಕೆಂಬ ಬಹುವರ್ಷಗಳ ಒತ್ತಾಯಕ್ಕೆ ಈ ಬಾರಿಯಾದರೂ ಸಿಎಂ ಕಿವಿಗೊಡಲಿ ಎನ್ನುವುದು ಜನರ ಬಯಕೆಯಾಗಿದೆ.
ಮೊದಲು ರೇಷ್ಮೆಗೆ ಜಿಲ್ಲೆ ಹೆಸರುವಾಸಿಯಾಗಿತ್ತು. ಈಗ, ರೇಷ್ಮೆಯನ್ನು ಬೆಳೆಯುವವರೇ ಇಲ್ಲದಂತಾಗಿದೆ. ರೇಷ್ಮೆಗೆ ಜಿಲ್ಲೆಯಲ್ಲಿ ಮಾರುಕಟ್ಟೆ ಒದಗಿಸಲು ಸಿಲ್ಕ್ ಪಾರ್ಕ್ ನಿರ್ಮಾಣ ಮಾಡಬೇಕು ಮತ್ತು ರೇಷ್ಮೆ ಬೆಳೆಗೆ ಉತ್ತೇಜನ ನೀಡಲು ಯೋಜನೆಗಳನ್ನು ತರಬೇಕು. ಜೊತೆಗೆ ಜಿಲ್ಲಾ ಕೇಂದ್ರದಲ್ಲಿ ಒಂದು ಸಂಸ್ಕೃತ ಪಾಠ ಶಾಲೆ, ಸರ್ಕಾರಿ ಫಾರ್ಮಸಿ ಕಾಲೇಜು ಮಂಜೂರು ಮಾಡಿದರೆ ಉದ್ಯೋಗಕ್ಕೆ ನೆರವಾಗಲಿದೆ ಎಂಬುದು ಜಿಲ್ಲೆಯ ಜನತೆ ಅಭಿಮತ.