ಚಾಮರಾಜನಗರ:ವರುಣನ ಆರ್ಭಟಕ್ಕೆ ಮನೆ ಗೋಡೆ ಕುಸಿದು ಬಾಲಕ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ದೇಶಿಗೌಡನಪುರದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಬಾಲಕ ವೀರಭದ್ರಸ್ವಾಮಿ(4) ಮೃತ ದುರ್ದೈವಿ. ತಂದೆ ಮಲ್ಲೇಶ್ ಹಾಗೂ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರಂತ ಬೆಳಗಿನ ಜಾವ ಸಂಭವಿಸಿದ್ದು, ಮಲಗಿದ್ದ ವೇಳೆ ಮನೆ ಗೋಡೆ ಕುಸಿದಿದೆ ಎಂದು ತಿಳಿದು ಬಂದಿದೆ.
ಮಣ್ಣಿನ ಗೋಡೆಯಾಗಿದ್ದರಿಂದ ರಾತ್ರಿ ಸುರಿದ ಮಳೆಗೆ ಗೋಡೆಯ ಒಂದು ಪಾರ್ಶ್ವ ಕುಸಿದು. ಬಾಲಕ ಹಾಗೂ ಪೋಷಕರ ಮೇಲೆ ಬಿದ್ದಿದೆ. ಉಸಿರುಗಟ್ಟಿ ಮಗು ಮೃತಪಟ್ಟಿದ್ದು, ತಂದೆ-ತಾಯಿ ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ತಹಶೀಲ್ದಾರ್ ಮತ್ತು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.