ಚಾಮರಾಜನಗರ:ರಾಷ್ಟೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಸದ್ಭಾವನ ಸಂಸ್ಥೆ ವಿರುದ್ಧ ಗೋಮಾಳ, ಹತ್ತಾರು ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು, ಕಲ್ಲು ತೆಗೆದಿರುವ ಆರೋಪ ಕೇಳಿ ಬಂದಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮಣ್ಣು ತೆಗೆಯಲು 10 ಎಕರೆಯಷ್ಟು ಜಮೀನನ್ನು ಸರ್ಕಾರ ಕೊಟ್ಟಿದೆ. ಆದರೆ, ಬೌಂಡರಿಯನ್ನು ಬಿಟ್ಟು 40 ಎಕರೆಯಷ್ಟು ಪ್ರದೇಶದಲ್ಲಿ ಮಣ್ಣು, ಕಲ್ಲು ತೆಗೆಯುತ್ತಿದ್ದು, ಸರ್ವೇ ನಂ- 29 ರಲ್ಲಿ 50 ಮಂದಿಗೆ ಜಮೀನಿದ್ದು ತಿರುಗಾಡಲಿರುವ ದಾರಿಯನ್ನು ಮುಚ್ಚಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಸದಸ್ಯರು ದೂರಿದ್ದಾರೆ.
ಗ್ರಾಪಂನ ಗಮನಕ್ಕೂ ತಾರದೇ ಬೇಕಾಬಿಟ್ಟಿ ಮಣ್ಣು ತೆಗೆಯುತ್ತಿದ್ದು ಪ್ರಭಾವಿಗಳ ಕೈವಾಡದಿಂದ ಜನಸಾಮಾನ್ಯರ ಕೃಷಿ ಚಟುವಟಿಕೆಗೆ ತೊಂದರೆ ಉಂಟಾಗಿದೆ. ಸಂಸ್ಥೆಗೆ ಕೊಟ್ಟಿರುವ ಬೌಂಡರಿಯಲ್ಲಷ್ಟೇ ಮಣ್ಣು ತೆಗೆಯಬೇಕು, ಉಳಿದೆಡೆ ನಿರ್ಮಿಸಿರುವ ಕಂದಕಗಳನ್ನು ಮುಚ್ಚಿ ರೈತರಿಗೆ ದಾರಿ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಅಕ್ರಮ ಗಣಿಗಾರಿಕೆ ಸ್ಥಳದಲ್ಲೇ ಪ್ರತಿಭಟನೆ ಕೂರುತ್ತೇವೆ ಎಂದು ಸದಸ್ಯರು ಎಚ್ಚರಿಸಿದ್ದಾರೆ.
ಜಿಲ್ಲಾಕೇಂದ್ರದಿಂದ 2 ಕಿಮೀ ದೂರದಲ್ಲೇ ರಾಜಾರೋಷವಾಗಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಆರೋಪ ಕೇಳಿಬಂದಿದ್ದು ಇನ್ನಾದರೂ ಡಿಸಿ ಡಾ.ಎಂ.ಆರ್.ರವಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.