ಚಾಮರಾಜನಗರ: ಜಿಲ್ಲೆಯಲ್ಲಿ ಮೊದಲನೇ ದಿನದ ಕರ್ಫ್ಯೂ ಚಾಲ್ತಿಯಲ್ಲಿದ್ದು, ಅಲ್ಲಲ್ಲಿ ಜನತೆ ರಸ್ತೆಗಿಳಿದು ಓಡಾಡುತ್ತಿದ್ದ ದೃಶ್ಯಗಳು ಕಂಡುಬಂದಿವೆ. ಹಲವರು ಬೈಕ್, ಕಾರು ಸೇರಿ ಇತರೆ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ.
ಮೆಡಿಕಲ್ ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದಾಗಿದ್ದರೂ ಭುವನೇಶ್ವರಿ ವೃತ್ತ, ಅಂಗಡಿ ಬೀದಿ, ಗುಂಡ್ಲುಪೇಟೆ ವೃತ್ತದಲ್ಲಿ ವಾಹನ ಸಂಚಾರ ಸಾಮಾನ್ಯವಾಗಿತ್ತು. ಹೆಲ್ಮೆಟ್ ಧರಿಸದೇ, ಮಾಸ್ಕ್ ಕೂಡ ಹಾಕದೇ ವಾಹನ ಸವಾರರು ಸಂಚರಿಸುತ್ತಿರುವುದು ಅಲ್ಲಲ್ಲಿ ಕಂಡುಬಂದಿದೆ.
ಅನಗತ್ಯವಾಗಿ ಜನರು ಓಡಾಡುವುದನ್ನು ತಡೆಯಲು ಪೊಲೀಸರು ಹಲವೆಡೆ ಚೆಕ್ಪೋಸ್ಟ್ ತೆರೆದಿದ್ದರೂ ಅವರ ಕಣ್ತಪ್ಪಿಸಿ ಓಡಾಡುತ್ತಿರುವುದು ಪತ್ತೆಯಾಗಿದೆ. ಈ ಕುರಿತು ನಗರಸಭಾ ಅಧ್ಯಕ್ಷ ಗಾಳಿಪುರ ಮಹೇಶ್, ಮಾತನಾಡಿ, ಜನರು ಜಾಗೃತರಾಗಿರಬೇಕು, ಅಗತ್ಯ ಸಮಯ ಹೊರತುಪಡಿಸಿ ಬೇರೆ ಕಾಲದಲ್ಲಿ ಹೊರಬರಬಾರದು. ಇನ್ನಾದರೂ ಜನರು ಅನಗತ್ಯವಾಗಿ ಸಂಚರಿಸುವುದನ್ನು ಬಿಡಬೇಕು ಎಂದಿದ್ದಾರೆ.