ಚಾಮರಾಜನಗರ : ಕಾಡುಗಳ್ಳ, ನರಹಂತಕ, ದಂತಚೋರ ಎಂದೇ ಕುಖ್ಯಾತಿಗಳಿಸಿದ್ದ ವೀರಪ್ಪನ್ ಸತ್ತರೂ ಆತನ ಕುಟುಂಬ ಮತ್ತೆ ರಾಜಕೀಯ ಕಾರಣಕ್ಕೆ ಮುನ್ನೆಲೆಗೆ ಬಂದಿದೆ.
ಭಾನುವಾರವಷ್ಟೇ ವೀರಪ್ಪನ್ ಹಿರಿಯ ಮಗಳಾದ ವಿದ್ಯಾರಾಣಿ ಬಿಜೆಪಿಗೆ ಸೇರ್ಪಡೆಗೊಂಡು ಪಾಲಿಟಿಕ್ಸ್ಗೆ ಎಂಟ್ರಿಯಾಗಿದ್ದಾರೆ. ಆದರೆ, ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಈಗಾಗಲೇ ಟಿ.ವೇಲು ಮುರುಗನ್ ಅವರ ಟಿವಿಕೆ ಪಾರ್ಟಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.
ಮಗಳು ಬಿಜೆಪಿ ಸೇರಿರುವ ಕುರಿತು ದೂರವಾಣಿ ಮೂಲಕ ಮುತ್ತುಲಕ್ಷ್ಮಿ ಈಟಿವಿ ಭಾರತದೊಂದಿಗೆ ಮಾತನಾಡಿ, ಆಕೆ ನನ್ನ ಬಳಿಯೇನೂ ಪಕ್ಷ ಸೇರುವ ಕುರಿತು ಮಾತನಾಡಿಲ್ಲ. ನಾನು ಜೈಲಿನಲ್ಲಿರಬೇಕಾದರೇ ಅವಳು ಪ್ರೇಮ ವಿವಾಹ ಮಾಡಿಕೊಂಡು ಕೃಷ್ಣಗಿರಿಯಲ್ಲಿ ನೆಲೆಸಿದ್ದಾಳೆ. ಮತ್ತೇನನ್ನೂ ನಾನು ಹೇಳುವುದಿಲ್ಲ.
ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷವಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ಮೆಟ್ಟೂರಿನಲ್ಲಿ ಚುನಾವಣೆಗೆ ನಿಲ್ಲಲು ಬಯಸಿದ್ದೇನೆ. ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು. ಮುತ್ತುಲಕ್ಷ್ಮಿ ಸೋದರ ಸಂಬಂಧಿಗಳೊಂದಿಗೆ ಮೆಟ್ಟೂರಿನಲ್ಲಿ ನೆಲೆಸಿದ್ದಾರೆ. ಅಮ್ಮ ಒಂದು ಪಕ್ಷದಲ್ಲಿದ್ದರೆ, ಮಗಳು ಮತ್ತೊಂದು ಪಕ್ಷಕ್ಕೆ ಸೇರಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.