ಚಾಮರಾಜನಗರ: ಯಡಿಯೂರಪ್ಪ ಜೈಲಿಗೆ ಹೋಗಿ ಬಂದ್ರೂ ಬುದ್ಧಿ ಕಲಿಯಲಿಲ್ಲ, ಅವರಿಗೆ ರಾಜಕಾರಣ ಮಾಡಲು ಗೊತ್ತೇ ಇಲ್ಲಾ, ಅದ್ಯಾರು ಅವರನ್ನು ಮುಖ್ಯಮಂತ್ರಿ ಮಾಡಿದರೋ ಗೊತ್ತಿಲ್ಲ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಅವರು ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕಂತೆ ರಾಜಕೀಯ ಮಾಡಬೇಕು. ನಾನೆಂದು ಪಕ್ಷಾಂತರ ಮತ್ತು ಜಾತಿ ರಾಜಕಾರಣ ಮಾಡಲಿಲ್ಲ. ನಾನು ಹೋರಾಟ ಮಾಡಿರುವುದು ಕನ್ನಡದ ಪರವೇ ಹೊರತು ಜಾತಿಯ ಪರವಲ್ಲ. ನಾನು ಸ್ವಲ್ಪ ಬದಲಾಗಿದ್ದರೇ ಎರಡು ಬಾರಿ ಸಿಎಂ ಆಗುತ್ತಿದ್ದೆ. ಯಡಿಯೂರಪ್ಪ ನನಗೆ ಜೂನಿಯರ್, ಅವರನ್ನು ಮುಖ್ಯಮಂತ್ರಿ ಅಂಥಾ ಕರೆಯಲಾಗುತ್ತಾ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರ ಮಂತ್ರಿ ಮಂಡಲ ಕಂಡರೇ ನಾಚಿಕೆ ಆಗುತ್ತೆ. ಸಿಎಂ ಆಗಿ ದಿನಕ್ಕೊಂದು ಹೇಳಿಕೆ ಕೊಡುತ್ತಾರೆ. ಎಂಟಿಬಿ ಆಟಿಬಿ ಈಟಿಬಿ ಥೂ-ಥೂ. ಮಂತ್ರಿಮಂಡಲ ಹೊಲಸಾಗಿದೆ. ಕಾನೂನು ಸಚಿವರಾಗಿದ್ದ ಮಾಧುಸ್ವಾಮಿ ಯಾವುದೇ ಅನ್ಯಾಯದ ಕಡತಗಳು ಬಂದರೇ ಸಹಿ ಹಾಕುತ್ತಿರಲಿಲ್ಲ, ಮುಖ್ಯಮಂತ್ರಿ ಹೇಳಿದರೂ ಸಹಿ ಹಾಕುತ್ತಿರಲಿಲ್ಲ. ಮಾಧುಸ್ವಾಮಿ ಇದ್ದರೆ ತಮ್ಮ ಆಟ ನಡೆಯಲ್ಲ ಎಂದು ಕಾನೂನು ಖಾತೆಯನ್ನು ಬೊಮ್ಮಾಯಿಗೆ ಕೊಟ್ಟಿದ್ದಾರೆ ಎಂದು ವಾಟಾಳ್ ಲೇವಡಿ ಮಾಡಿದರು.
ಈ ರಾಜ್ಯ ಸರ್ಕಾರಕ್ಕೆ ಕನ್ನಡದ ಬಗ್ಗೆ, ಕನ್ನಡದ ನೆಲದ ಬಗ್ಗೆ ಗೌರವವಿಲ್ಲ. ನನಗೆ ನಿತ್ಯ ಗಡಿ, ನೀರು, ನಮ್ಮ ರಾಜ್ಯ ಅದರ ಬಗ್ಗೆಯೇ ಯೋಚನೆ ಇದು ಕೊಂಗಳ್ಳಿ ಮಲ್ಲಿಕಾರ್ಜುನ ಸ್ವಾಮಿ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ ಎಂದರು.