ಚಾಮರಾಜನಗರ: ಬಂಡೀಪುರ ರಾತ್ರಿ ಸಂಚಾರ ನಿಷೇಧವನ್ನು ತೆರವುಗೊಳಿಸುವ ವಿಚಾರ ರಾಹುಲ್ ಗಾಂಧಿ ವರ್ಸಸ್ ನನ್ನ ನಡುವಿನ ಚಾಲೆಂಜ್ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಸವಾಲೆಸೆದಿದ್ದಾರೆ.
ನಗರದ ಬಿಆರ್ಟಿ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಅವರು, ಒಂದು ವೇಳೆ ರಾಗಾ ರಾತ್ರಿ ಸಂಚಾರ ತೆರವುಗೊಳಿಸಿದ್ದೇ ಆದರೆ ಸಂಚಾರ ನಿಷೇಧಕ್ಕಾಗಿ ನಾವು ರಾಜಕೀಯ ಮಾಡಲ್ಲ ಎಂದು ಹೇಳಿದರು.
ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವ ಹುನ್ನಾರದ ಹಿಂದೆ ಮರದ ಮಾಫಿಯಾ ಇದ್ದು, ಬಹಳಷ್ಟು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಮಾಫಿಯಾಗೆ ಬೆಂಬಲ ನೀಡಬಾರದು ಎಂದು ಒತ್ತಾಯಿಸಿದರು.
ಅ. 20ಕ್ಕೆ ಚಾಮರಾಜನಗರ ಬಂದ್!
ಇದೇ 15ರಂದು ಬಂಡೀಪುರ-ಕೇರಳ ಗಡಿಯನ್ನು ಬಂದ್ ಮಾಡಲಿದ್ದು, 20ಕ್ಕೆ ಚಾಮರಾಜನಗರ ಜಿಲ್ಲೆ ಸಂಪೂರ್ಣ ಬಂದ್ ಆಗಲಿದೆ. ಕರ್ನಾಟಕಕ್ಕಾಗಿ, ಕನ್ನಡಿಗರಿಗಾಗಿ, ವನ್ಯ ಸಂಪತ್ತಿನ ಉಳಿವಿಗಾಗಿ ಬಂದ್ ಕರೆ ಕೊಡಲಾಗಿದೆ ಎಂದರು.