ಕೊಳ್ಳೇಗಾಲ : ಸ್ವಚ್ಛತೆಯಿಲ್ಲದ ಶೌಚಾಲಯ, ಶಾಲೆಯ ಮುಂದೆಯೇ ನಿಂತ ಚರಂಡಿ ನೀರು, ಶಿಥಿಲಾವಸ್ಥೆ ತಲುಪಿರುವ ಛಾವಣಿಯಿಂದ ಮಕ್ಕಳು ಮಕ್ಕಳು ಭಯದಲ್ಲೇ ಪಾಠ ಕೇಳಿ ಹೋಗುವ ಪರಿಸ್ಥಿತಿ ಉಗನೀಯ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿಯಾಗಿದ್ದು ಅಶುಚಿತ್ವ ತಾಂಡವವಾಡುತ್ತಿದೆ.
ತಾಲೂಕಿನ ಉಗನೀಯ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ತಾಣವಾಗಿದೆ. ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲದಂತಾಗಿದೆ. ಪ್ರಸ್ತುತ ಶಾಲೆಯಲ್ಲಿ 83 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಸುಮಾರು ಅರ್ಧದಷ್ಟು ವಿದ್ಯಾರ್ಥಿನಿಯರಿದ್ದಾರೆ. ಆದರೆ, ಶಾಲೆಯಲ್ಲಿ ಕೇವಲ ಎರಡು ಶೌಚಾಲಯವಿದ್ದು, ಅವು ಅಶುಚಿತ್ವದಿಂದ ತಾಣವಾಗಿದೆ.
ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒಂದೇ ಶೌಚಾಲಯ : ಒಂದು ಶೌಚಾಲಯಕ್ಕೆ ಶಾಲಾ ಶಿಕ್ಷಕ ವೃಂದ ಬೀಗ ಜಡಿದು ಉಪಯೋಗಿಸುತ್ತಿದ್ದಾರೆ. ಉಳಿದ ಒಂದು ಶೌಚಾಲಯವನ್ನು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಬಳಸಬೇಕಾಗಿರುವ ಅನಿವಾರ್ಯತೆ ಇದೆ. ಅದು ಸಹ ನಿರ್ವಹಣೆಯಿಲ್ಲದೆ ಗಬ್ಬುನಾರುತ್ತಿದೆ.
ಶೌಚಾಲಯಕ್ಕೆ ತೆರಳಬೇಕಾದರೆ ಶಾಲೆಯ ಹಳೆಯ ಕಟ್ಟಡ ಸಮೀಪದಲ್ಲೆ ವಿದ್ಯಾರ್ಥಿಗಳು ಸಾಗಬೇಕಿದೆ. ಶಿಥಿಲಾವಸ್ಥೆ ತಲುಪಿರುವುದರಿಂದ ಕಟ್ಟಡದ ಛಾವಣಿಯ ಹೆಂಚುಗಳು ಮಕ್ಕಳಿಗೆ ಯಾವಗಾಬೇಕಾದರೂ ಅಪಾಯ ತಂದ್ದೊಡಬಹುದುದಾಗಿದೆ.
ಶಾಲೆ ಶಿಕ್ಷಕರ ನಿರ್ಲಕ್ಷ್ಯ: ಶಾಲೆಯ ಆವರಣದಲ್ಲಿ ಮಕ್ಕಳ ಆಟೋಟ ಚಟುವಟಿಕೆಗಳಿಗೆ ಕಿರಿದಾದ ಜಾಗವಿದ್ದರು. ಉಬ್ಬು-ತಗ್ಗುಗಳಿಂದ ಕೂಡಿದ್ದು ಸಮತಟ್ಟಿ ಕಿರಿದಾಗಿರುವ ಮೈದಾನದಿಂದ ಮಕ್ಕಳ ಕ್ರೀಡಾ ಚಟುವಟಿಕೆಗೂ ಅಡಚಣೆಯಾಗಿದೆ. ಇವೆಲ್ಲ ಅವ್ಯವಸ್ಥೆ ಕಣ್ಣಿಗೆ ಕಂಡರೂ ಶಾಲೆಯ ಶಿಕ್ಷಕ ವೃಂದವಾಗಲಿ ಹಾಗೂ ಶಿಕ್ಷಣ ಇಲಾಖೆಯಾಗಲಿ ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಶಾಲೆ ಮುಂದೆ ನಿಂತಿದೆ ಚರಂಡಿ ನೀರು : ಶಾಲಾ ಕಟ್ಟಡ ಮುಂಭಾಗವೇ ಚರಂಡಿ ಹಾದು ಹೋಗಿದೆ. ನಿರ್ವಹಣೆ ಕೊರತೆಯಿಂದ ಚರಂಡಿಯೊಳಗೆ ಗಿಡಗಂಟಿಗಳು ಬೆಳೆದು ನೀರು ಸಾಗದೆ ಗಬ್ಬುನಾರುತ್ತಿದೆ. ಮಕ್ಕಳು ಶಾಲೆಗೆ ಬರುವಾಗ ಹೋಗುವಾಗ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ಉದ್ಭವವಾಗಿದೆ.
ತಲೆ ಕೆಡಿಸಿಕೊಳ್ಳದ ಗ್ರಾಮ ಪಂಚಾಯತ್ : ಈ ಬಗ್ಗೆ ಪ್ರತಿಕ್ರಿಯಿಸಿದ ಸಿಡಿಎಂಸಿ ಅಧ್ಯಕ್ಷ ರಾಜೇಶ್, ಮಕ್ಕಳಿಗೆ ಬೇಕಾದ ಕನಿಷ್ಠ ಮೂಲಸೌಕರ್ಯವೂ ಉಗನೀಯ ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ದೊರಕಿಲ್ಲ. ಗ್ರಾಪಂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆನ್ನುವುದು ಮಾತ್ರ ಸತ್ಯ. ಆದರೆ, ಅದೂ ಸತ್ಯವಾಗಿ ಉಳಿದಿಲ್ಲ.
ಈ ಬಗ್ಗೆ ಅನೇಕ ಭಾರಿ ಗ್ರಾಮ ವ್ಯಾಪ್ತಿಯ ಪಿಡಿಒಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಮಂದಾದರೂ ಶಾಲೆಯ ಸ್ವಚ್ಛತೆ ಹಾಗೂ ಸೌಕರ್ಯಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಪ್ರಸ್ತುತ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ದಿನಗಳಲ್ಲಿ ಅಲ್ಲಿನ ಲೋಪ ದೋಷಗಳನ್ನು ಸರಿಪಡಿಸುವ ಕೆಲಸ ಆಗಬೇಕಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ನೈರ್ಮಲ್ಯತೆ ಹಾಗೂ ಸೌಕರ್ಯಕ್ಕೆ ಕ್ರಮವಹಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.