ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಸ್ಥಳವಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ದೀಪಾವಳಿ ಜಾತ್ರೆ ಆರಂಭಗೊಂಡಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಪಾದಯಾತ್ರೆ ಮೂಲಕ ಕ್ಷೇತ್ರಕ್ಕೆ ತೆರಳುತ್ತಿದ್ದು, ಅವಿವಾಹಿತ ಯುವಕರು ಮದುವೆ ಆಗಲೆಂದು ಮಾದಪ್ಪನ ಮೊರೆ ಹೋಗಿದ್ದಾರೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ದೊಡ್ಡಮೂಡು ಎಂಬ ಗ್ರಾಮದಿಂದ ಯುವಕರ ದಂಡೇ ಮದುವೆ ಭಾಗ್ಯ ಕರುಣಿಸು ಎಂದು ಪಾದಯಾತ್ರೆ ನಡೆಸುತ್ತಿದ್ದಾರೆ. ಇಂದು ಹನೂರಿನಲ್ಲಿ ಮಾತನಾಡಿದ ಯುವಕರು, ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. 11 ವರ್ಷಗಳ ಹಿಂದೆ 10 - 20 ಯುವಕರ ತಂಡದೊಂದಿಗೆ ಆರಂಭವಾದ ನಮ್ಮ ಪಾದಯಾತ್ರೆ ಈಗ ನೂರಾರು ಸಂಖ್ಯೆ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಭಾಗ್ಯಗಳನ್ನು ಕೊಟ್ಟಿದ್ದಾರೆ. ಅದೇ ರೀತಿ ರೈತರ ಮಕ್ಕಳಿಗೆ ಹೆಣ್ಣು ಭಾಗ್ಯವನ್ನು ಕೊಡಬೇಕು. ನಮಗೆ ಹಣ ಬೇಡ, ವಿವಾಹ ಭಾಗ್ಯ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ನೂರಕ್ಕೂ ಹೆಚ್ಚು ಯುವಕರಿಂದ ಪಾದಯಾತ್ರೆ: ಕೆಲ ದಿನಗಳ ಹಿಂದೆಯಷ್ಟೇ ದೀಪಾವಳಿ ಹಬ್ಬ ಹಾಗೂ ಕಾರ್ತಿಕ ಮಾಸದ ಪ್ರಯುಕ್ತ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ನೂರಾರು ಯುವಕರು ಮಳೆ ಬರಲಿ ಹಾಗೂ ರೈತರು, ಕೂಲಿ ಕಾರ್ಮಿಕರಿಗೆ ಮದುವೆಗೆ ಹೆಣ್ಣು ಸಿಗಲೆಂದು ಪ್ರಾರ್ಥಿಸಿ ಪಾದಯಾತ್ರೆ ಕೈಗೊಂಡಿದ್ದರು. ಕೋಡಹಳ್ಳಿ ಗ್ರಾಮದಿಂದ ಬುತ್ತಿ ಕಟ್ಟಿಕೊಂಡು, ಒಂದು ಬೆತ್ತ ಹಿಡಿದು ಮಹದೇಶ್ವರನ ನಾಮಸ್ಮರಣೆ ಮಾಡುತ್ತಾ, ಸುಮಾರು 4 ದಿನಗಳ ಕಾಲ 160 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದರು.
ಹಿಂದಿನಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪಾದಯಾತ್ರೆ ಕೈಗೊಂಡಿದ್ದ ಯುವಕರು, ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಮದುವೆಗೆ ಹೆಣ್ಣು ಸಿಗಲಿ, ಪ್ರಸ್ತುತ ಇರುವ ಬರಗಾಲ ಹೋಗಲಾಡಿಸಿ ನಾಡಿಗೆ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆಯಾಗಿ, ಯಾವುದೇ ರೋಗ ರುಜಿನಗಳು ಬರದೇ ಜನರು ಆರೋಗ್ಯವಾಗಿರಲಿ ಎಂದು ಮಾದಪ್ಪನಿಗೆ ಪ್ರಾರ್ಥನೆ ಸಲ್ಲಿಸಿದ್ದರು.
ರೈತರು ಹಾಗೂ, ಕೂಲಿ ಕಾರ್ಮಿಕರಿಗೆ ಮದುವೆಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿರುವ ಸಮಾಜದ ಮನಸ್ಥಿತಿಯನ್ನು ಬದಲಾಯಿಸು ಎಂದು ಬೇಡಿಕೊಂಡು ಮಾದಪ್ಪನಿಗೆ ಪೂಜೆ ಸಲ್ಲಿಸಿ ಬಂದಿದ್ದರು. ಪಾದಯಾತ್ರೆಯಲ್ಲಿ ಕೋಡಹಳ್ಳಿ ಗ್ರಾಮದ ನೀಲಗಾರರು ಹಾಗೂ ಮಹದೇಶ್ವರ ಗುಡ್ಡರು ಸಮುದಾಯದ 100ಕ್ಕೂ ಅಧಿಕ ಯುವಕರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಮಾದಪ್ಪನ ಬೆಟ್ಟದಲ್ಲಿ ಇಂದಿನಿಂದ ದೀಪಾವಳಿ ಜಾತ್ರೆ: ಬೈಕ್ ನಿಷೇಧ, 500ಕ್ಕೂ ಹೆಚ್ಚು ಬಸ್ ಸೌಲಭ್ಯ