ಚಾಮರಾಜನಗರ: ಈಶ ಫೌಂಡೇಶನ್ ವತಿಯಿಂದ ಕಾವೇರಿ ನದಿಯ ಪುನಶ್ಚೇತನ ತಲಕಾವೇರಿಯಿಂದ ಪೂಂಪುಹಾರ್ ವರೆಗೆ, 1500 ಕಿ.ಮೀ ವರೆಗೆ ಕಾವೇರಿ ಕೂಗು ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಸೆ. 3 ರಂದು ಈ ಅಭಿಯಾನಕ್ಕೆ ಚಾಲನೆ ಸಿಗಲಿದೆ ಎಂದು ಈಶ ಫೌಂಡೇಶನ್ ಸ್ವಯಂ ಸೇವಕರಾದ ಬಿ.ಎಂ. ಬಾಲಸುಬ್ರಹ್ಮಣ್ಯಂ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಶ ಫೌಂಡೇಶನ್ ಸಂಸ್ಥಾಪಕ ಮತ್ತು ಆಧ್ಯಾತ್ಮಿಕ ನಾಯಕ ಸದ್ಗುರು ಅವರು ಕಾವೇರಿ ಕೂಗು ಎಂಬ ಬೃಹತ್ ಅಭಿಯಾನದ ಮೂಲಕ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಕಾವೇರಿ ಜಲಾನಯನ ಪ್ರದೇಶಗಳಲ್ಲಿ 242 ಕೋಟಿ ಮರಗಳನ್ನು ಬೆಳೆಸುವ ಗುರಿಹೊಂದಿದ್ದು, ಪ್ರತಿ ಮರಕ್ಕೆ 42 ರೂ. ವೆಚ್ಚ ತಗುಲಲಿದೆ. ಕಾವೇರಿ ನದಿ ಪ್ರದೇಶದಲ್ಲಿ ಅರಣ್ಯಕೃಷಿಯನ್ನು ಪ್ರೋತ್ಸಾಹಿಸುವ ಮೂಲಕ 242 ಕೋಟಿ ಮರಗಳನ್ನು ಬೆಳೆಸಬೇಕಿದ್ದು, ಅರಣ್ಯ ಕೃಷಿಯನ್ನು ರೈತರಿಗೆ ಲಾಭವಾಗುವ ರೀತಿಯಲ್ಲಿ ಮಾಡಬೇಕಿದೆ. ಅರಣ್ಯ ಕೃಷಿಯಿಂದ ಲಾಭ ತಂದುಕೊಡುವಂತ 18 ಜಾತಿಯ ಮರಗಳನ್ನು ಈಶ ಫೌಂಡೇಶನ್ ಗುರುತಿಸಿದ್ದು, ಈ ಗಿಡಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅರಣ್ಯಕೃಷಿಗೆ ಕೈ ಜೋಡಿಸುವವರು ಒಂದು ಗಿಡಕ್ಕೆ 42 ರೂ.ಗಳ ದೇಣಿಗೆ ನೀಡಿಬಹುದಾಗಿದೆ. ಈಗಾಗಲೇ ಅರಣ್ಯಕೃಷಿಗೆ ಕೈ ಜೋಡಿಸಿರುವವರು 27 ಲಕ್ಷ ಸಸಿಗಳಿಗೆ ದೇಣಿಗೆ ನೀಡಿದ್ದಾರೆ. ಪ್ರತಿದಿನ 82 ಸಾವಿರ ಸಸಿಗಳಿಗೆ ದೇಣಿಗೆ ಕೊಡುತ್ತಿದ್ದಾರೆ. ಅಭಿಯಾನದ ಬೆಂಬಲಿತರು ಸಾಧ್ಯವಾದಷ್ಟು ದೇಣಿಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.
ವಿಶ್ವಸಂಸ್ಥೆ ಗಮನ:
ಸದ್ಗುರು ಅವರು ಆರಂಭಿಸಿರುವ ಕಾವೇರಿ ಕೂಗು ಅಭಿಯಾನವನ್ನು ವಿಶ್ವಸಂಸ್ಥೆ ಗಮನಿಸುತ್ತಿದ್ದು, ಅರಣ್ಯ ಕೃಷಿಯಿಂದ ಕಾವೇರಿ ತನ್ನ ಜೀವಂತಿಕೆ ಹೆಚ್ಚಿಸಿಕೊಂಡ ಬಳಿಕ ಈ ಮಾದರಿಯನ್ನು ವಿಶ್ವದಾದ್ಯಂತ ನದಿಗಳ ಉಳಿವಿಗಾಗಿ ಬಳಸಿಕೊಳ್ಳಲಾಗುತ್ತದೆ ಎಂದರು.
ಇನ್ನು ಅರಣ್ಯ ಕೃಷಿಗೆ ಕೈಜೋಡಿಸುವವರು ಮೊಬೈಲ್ ಸಂಖ್ಯೆ 9663595789, 9740249302, 9663326770 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಕೋರಿದರು.