ಚಾಮರಾಜನಗರ: ತಮ್ಮಿಚ್ಛೆಯ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ಹುಮ್ಮಸಿನಲ್ಲಿ ಲಕ್ಷ-ಲಕ್ಷ ಹಣ ಹಿಡಿದು ಬಾಜಿಗೆ ಆಹ್ವಾನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಹಣ ಹಿಡಿದು ಪಂಥಕ್ಕೆ ಆಹ್ವಾನಿಸಿದ ಕೊಳ್ಳೇಗಾಲ ತಾಲೂಕು ಬಸ್ತಿಪುರ ಗ್ರಾಮದ ಮಲ್ಲೇಶ್ ಹಾಗೂ ಬಾಜಿ ವಿಡಿಯೋ ಮಾಡಿದ್ದ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಲ್ಲೇಶ್ ತರಕಾರಿ ವ್ಯಾಪಾರಿಯಾಗಿದ್ದು, 8 ಲಕ್ಷ ರೂ. ಹಣದ ಕಂತೆ ಮುಂದೆ ಪಂಥಕ್ಕೆ ಆಹ್ವಾನಿಸಿದ್ದರು.
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ಮೂರು ಲಕ್ಷ, ಹನೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಪರವಾಗಿ 3 ಲಕ್ಷ ಹಾಗೂ ಕೊಳ್ಳೇಗಾಲ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಎ ಆರ್ ಕೃಷ್ಣಮೂರ್ತಿ ಪರವಾಗಿ 2 ಲಕ್ಷ ಹಣ ಕಟ್ಟುತ್ತೇನೆ. ಬನ್ನಿ ಬಾಜಿ ಕಟ್ಟಿ ಎಂದು ಮಲ್ಲೇಶ್ ಆಹ್ವಾನಿಸಿದ್ದರು. ಚುನಾವಣಾ ಅಧಿಕಾರಿಗಳ ಮೌಖಿಕ ಸೂಚನೆ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಜೂಜಾಟಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ದೂರು ನೀಡಿದ್ದರು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಅಭ್ಯರ್ಥಿ ಗೆಲುವಿನ ಬಗ್ಗೆ 1 ಕೋಟಿ ಬೆಟ್ : ಬಿಜೆಪಿ ಶಾಸಕ ನಿರಂಜನಕುಮಾರ್ ಗೆಲ್ಲುಲಿದ್ದಾರೆ. ಹೀಗಾಗಿ ತಾನು 1 ಕೋಟಿ ಬೆಟ್ ಕಟ್ಟುತ್ತೇನೆಂದು ಬಾಜಿಗೆ ಆಹ್ವಾನಿಸಿದ ಗುಂಡ್ಲುಪೇಟೆ ಪುರಸಭಾ ಸದಸ್ಯನ ಮನೆ ಮೇಲೆ ಶುಕ್ರವಾರ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ. ನಿರಂಜನ್ ಪರ ಬೆಟ್ಟಿಂಗ್ಗೆ ಒಂದು ಕೋಟಿಗೆ ಆಹ್ವಾನ ನೀಡಿದ್ದ ಪುರಸಭೆ ಸದಸ್ಯ ಕಿರಣ್ ಗೌಡ ಮನೆ ಮೇಲೆ ಗುಂಡ್ಲುಪೇಟೆ ಪಟ್ಟಣ ಠಾಣಾ ಸಿಬ್ಬಂದಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂಬುದು ತಿಳಿದುಬಂದಿದೆ.
ಬಿಜೆಪಿ ಅಭ್ಯರ್ಥಿ ಪರ ಒಂದು ಕೋಟಿ ಬೆಟ್ಟಿಂಗ್ ಕಟ್ಟುತ್ತೇನೆಂದು ಕಿರಣ್ ಗುರುವಾರ ವಿಡಿಯೋ ಹರಿಬಿಟ್ಟಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದರು. ಪಿಐ ಮುದ್ದುರಾಜ್, ಸಬ್ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಒಂದು ಎಕರೆ ಜಮೀನು ಬಾಜಿ : ಮತ್ತೊಂದು ಕಡೆ ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಎಂ. ಆರ್ ಮಂಜುನಾಥ್ ಗೆಲ್ಲುತ್ತಾರೆ ಎಂದು ಒಂದು ಎಕರೆ ಜಮೀನು ಬಾಜಿಗೆ ಕಟ್ಟುತ್ತೇನೆ ಎಂದು ವ್ಯಕ್ತಿಯೋರ್ವ ಪಂಥಾಹ್ವಾನ ನೀಡಿರುವ ಘಟನೆಯೂ ನಡೆದಿದೆ. ಹನೂರು ಪಟ್ಟಣದ ಮೈಸೂರು ಮಾರಮ್ಮ ದೇವಾಲಯ ಸಮೀಪದ ನಿವಾಸಿ ರಂಗಸ್ವಾಮಿ ನಾಯ್ಡು ಎಂಬವರು ಒಂದು ಎಕರೆ ಜಮೀನನ್ನು ಜೆಡಿಎಸ್ ಅಭ್ಯರ್ಥಿ ಪರವಾಗಿ ಬಾಜಿ ಕಟ್ಟಲು ರೆಡಿ ಇದ್ದೇನೆ, ಬಿಜೆಪಿ, ಕಾಂಗ್ರೆಸ್ ಪಕ್ಷದವರು ಸೇರಿದಂತೆ ಯಾರಾದರೂ ಬಾಜಿಗೆ ಬರಬಹುದು ಎಂದು ಆಹ್ವಾನಿಸಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಅಭ್ಯರ್ಥಿ ಗೆಲುವಿನ ಬಗ್ಗೆ 1 ಕೋಟಿ ಬೆಟ್ಗೆ ಆಹ್ವಾನಿಸಿದ್ದ ಪುರಸಭೆ ಸದಸ್ಯನ ಮನೆ ಮೇಲೆ ಪೊಲೀಸ್ ದಾಳಿ