ಚಾಮರಾಜನಗರ: ಕೊರೊನಾ ತಡೆಗೆ ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಹಬೆ, ಚವನ್ ಪ್ರಾಶ್, ತರಕಾರಿ ಹೀಗೆ ಸಿಟಿ ಮಂದಿ ಆಹಾರ ಪದ್ಧತಿ ರೂಢಿಸಿಕೊಂಡಂತೆ ಗಿರಿಜನರು ಕೂಡ ತಮ್ಮ ಆಹಾರ ಪದ್ಧತಿಯಲ್ಲಿ ಕೊಂಚ ಬದಲಾಯಿಸಿ ಕೊರೊನಾಗೆ ಗುದ್ದು ಕೊಡಲು ಮುಂದಾಗಿದ್ದಾರೆ.
ಕಾಡು ಮತ್ತು ಅರಣ್ಯ ಸಂಪನ್ಮೂಲಗಳನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ಸೋಲಿಗರು ಪ್ರಸ್ತುತ ಲಾಕ್ಡೌನ್ನಲ್ಲಿ ಪೌಷ್ಟಿಕ ಆಹಾರ ಅರಸಿ ಕಾಡಿನ ಮೊರೆ ಹೋಗಿದ್ದಾರೆ. ಪಟ್ಟಣ, ತಾಲೂಕು ಕೇಂದ್ರಗಳಿಗೆ ತೆರಳದೇ ಅರಣ್ಯದ ಉಪ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.
ಬಿಳಿಗಿರಿರಂಗನ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ಮಲೆಮಹದೇಶ್ವರ ಮತ್ತು ಕಾವೇರಿ ವನ್ಯ ಧಾಮದ ವ್ಯಾಪ್ತಿಯಲ್ಲಿ ನೆಲೆಸಿರುವ ಸೋಲಿಗರು ಈಗ ನೊರೆ ಗೆಣಸು, ಬಿದಿರಕ್ಕಿ ಗಂಜಿ, ಸೀಗೆ ಸೊಪ್ಪಿನ ಕಷಾಯ, ವಾರಕ್ಕೆ ಎರಡು ಬಾರಿ ಕೋಳಿ ಖಾರ ತಿನ್ನುವ ಮೂಲಕ ಕೊರೊನಾ ಮಣಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು, ಸೋಲಿಗ ಮಹಿಳೆ ಈರಮ್ಮ ಪ್ರತಿಕ್ರಿಯಿಸಿ, ಬಿದಿರಕ್ಕಿ, ನೊರೆ ಗೆಣಸು ಜೀವಕ್ಕೆ ಬಹಳ ಒಳ್ಳೆಯದು. ಮಕ್ಕಳು-ಹಿರಿಯರಿಗೆ ಕಾಯಿಲೆಗಳು ಬರದಂತೆ ತಡೆಯಲಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಬಿದಿರಕ್ಕಿ ಹಾಗೂ ಗೆಣಸಿನ ಮೊರೆ ಹೋಗಿದ್ದೇವೆ ಎಂದು ತಿಳಿಸಿದರು.
ಸೋಲಿಗರ ಮುಖಂಡ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನಮ್ಮ ಗಿರಿಜನರು ಕಾಡಿನಲ್ಲಿ ದೊರೆಯುವ ವಿವಿಧ ಔಷಧಿಯುಕ್ತ ಸೊಪ್ಪು, ನೊರೆ ಗೆಣಸು, ಬೇಲದಹಣ್ಣನ್ನು ಹೆಚ್ಚು ಬಳಸುತ್ತಿದ್ದಾರೆ. ಜೊತೆಗೆ ರಾಗಿಮುದ್ದೆ, ಸೊಪ್ಪಿನ ಸಾರು ನಿತ್ಯದ ಆಹಾರವಾಗಿದೆ. ತಮ್ಮ ಪೋಡುಗಳನ್ನು ಬಿಟ್ಟು ಬೇರೆಡೆ ಹೋಗದಂತೆ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ. ಪಟ್ಟಣ, ಜಿಲ್ಲಾ ಕೇಂದ್ರಗಳತ್ತ ಹೋಗುವುದನ್ನು ನಿಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಸರ್ಕಾರ ಕೊಡುವ ವಿಶೇಷ ಆಹಾರ ಕಿಟ್ ಕೂಡ ಗಿರಿಜನರಿಗೆ ಉಪಯೋಗವಾಗಿದ್ದು ಆಹಾರ, ಆದಿವಾಸಿ ವೈದ್ಯ ಪದ್ಧತಿ ಮೂಲಕವೇ ಕೊರೊನಾಗೆ ಗುದ್ದು ಕೊಡಲು ಗಿರಿಜನರು ಸಜ್ಜಾಗಿದ್ದಾರೆ. ಅಂದಹಾಗೆ, ಹಾಡಿಗಳಲ್ಲಿ ಕೊರೊನಾ ಕಾಣಿಸಿಕೊಂಡಿರುವುದು ಕೇವಲ ಬೆರಳಣಿಕಯಷ್ಟು.