ಚಾಮರಾಜನಗರ: ಕಳೆ ಗಿಡ ಲಂಟಾನಾ ಮುಂದಿನ ದಿನಗಳಲ್ಲಿ ನಿಮ್ಮ ಮನೆಯನ್ನು ಅಲಂಕರಿಸಲಿದೆ. ಅರಣ್ಯ ರಕ್ಷಣೆ ಜೊತೆಗೆ ಉದ್ಯೋಗ ಸೃಷ್ಟಿಯೂ ಆಗಲಿದೆ. ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಬೆಲ್ಲತ್ತ ಗ್ರಾಮದಲ್ಲಿ ಅರಣ್ಯ ಇಲಾಖೆಯು ಲಂಟಾನಾದಿಂದ ಪೀಠೋಪಕರಣ ಹಾಗೂ ಗೃಹೋಪಯೋಗಿ ವಸ್ತುಗಳ ತಯಾರಿಕೆಗೆ ತರಬೇತಿಯನ್ನು ಸೋಲಿಗರಿಗೆ ಕೊಡುತ್ತಿದೆ.
ವಿದೇಶದಿಂದ ಅಲಂಕಾರಿಕ ಸಸ್ಯವಾಗಿ ದೇಶಕ್ಕೆ ಬಂದ ಲಂಟಾನಾ ಈಗ ಕಾಡಿಗೆ ಕಂಟಕವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಈ ಕಳೆ ಗಿಡಗಳನ್ನೇ ಉಪಯೋಗಿಸಿಕೊಂಡು ಅಲಂಕಾರಿಕ ವಸ್ತುಗಳನ್ನು ಮಾಡಲು ಸೋಲಿಗರಿಗೆ ಪ್ರೇರಣೆ ಕೊಡಲು ಇಲಾಖೆ ಮುಂದಾಗಿದೆ. ಕಾಡಿನ ಕಳೆಗಿಡ ಕಡಿಮೆ ಆಗುವ ಜೊತೆಗೆ ಸೋಲಿಗರಿಗೂ ಈ ಮೂಲಕ ಉದ್ಯೋಗ ಕೊಟ್ಟಂತಾಗಲಿದೆ ಎಂಬುದು ಅರಣ್ಯಾಧಿಕಾರಿಗಳ ಯೋಜನೆ.
ಇದನ್ನೂ ಓದಿ: 43,000 ಗಿಡಗಳನ್ನು ನೆಟ್ರು-ವ್ಯಾಪಾರಿಗಳಿಗೆ ತಳ್ಳುವಗಾಡಿ ನೀಡಿದ್ರು: ಇದು ಸಾಂಸ್ಕೃತಿಕ ನಗರಿಯ ರಾಘವನ್ ಸೇವೆ
ಚಾಮರಾಜನಗರ ತಾಲೂಕಿನ ಬೆಲ್ಲತ್ತದಲ್ಲಿ ಅರಣ್ಯ ಇಲಾಖೆಯು ಸ್ವಯಂ ಉದ್ಯೋಗದ ಕಾರ್ಯಾಗಾರ ನಡೆಸುತ್ತಿದ್ದು, ಲಂಟಾನಾದಿಂದ ಆನೆಗಳನ್ನು ತಯಾರಿಸಿ ಲಂಡನ್ಗೆ ಕಳುಹಿಸುವ ಪಾಪಣ್ಣ ಎಂಬುವವರಿಂದ ಈ ತರಬೇತಿ ಕಾರ್ಯ ನಡೆಸಲಾಗುತ್ತಿದೆ. 45ಕ್ಕೂ ಹೆಚ್ಚು ಮಂದಿ ಸೋಲಿಗರು ಸಕ್ರಿಯವಾಗಿ ಈ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಯಾವ್ಯಾವ ವಸ್ತುಗಳು: ಲಂಟಾನಾದಿಂದ ಗೃಹೋಪಯೋಗಿ ವಸ್ತುಗಳಾದ ಕುರ್ಚಿ, ಟಿಪಾಯಿ, ಕಸದ ಬುಟ್ಟಿ, ಪೆನ್ ಸ್ಟಾಂಡ್, ಫ್ಲವರ್ ಬಾಸ್ಕೆಟ್, ಮಂಚ ತಯಾರಿಸಲು ತರಬೇತಿ ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಕಾಡಿನ ಕಳೆ ಮನೆಗಳನ್ನು ಅಲಂಕರಿಸಲಿದೆ. ಜೊತೆಗೆ ಕಾಡಿನಲ್ಲಿ ಕಳೆಗಿಡದ ಆರ್ಭಟವೂ ಕಡಿಮೆಯಾಗಲಿದೆ.