ಚಾಮರಾಜನಗರ: ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ದೊಡ್ಡ ತಿರುವು ಸೇರಿದಂತೆ ಹಲವು ಕಡೆ ರಸ್ತೆ ಕೊರಕಲು ಉಂಟಾಗಿರುವ ಕಾರಣ ಬೆಟ್ಟಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಕಳೆದ ಮೂರು ದಿನದಿಂದಲೂ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ನಿರಂತರವಾಗಿ ಮಳೆಯಾದ ಕಾರಣ ಮಳೆ ನೀರು ಹರಿದು ರಸ್ತೆಯ ಎರಡು ಬದಿಯಲ್ಲಿ ಕೊರಕಲು ಉಂಟಾಗಿದೆ. ಈ ಹಿನ್ನೆಲೆ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಗಳನ್ನು ನಿರ್ಬಂಧಿಸಿದ್ದು ಸಾವಿರಾರು ಪ್ರವಾಸಿಗರು ಪೆಚ್ಚುಮೋರೆ ಹಾಕಿಕೊಂಡು ವಾಪಾಸ್ ಆಗಿದ್ದಾರೆ.
ಇಂದು ಭಾನುವಾರವಾದ ಹಿನ್ನೆಲೆ ಮೈಸೂರು, ಬೆಂಗಳೂರು ಸೇರಿದಂತೆ ನೆರೆಯ ತಮಿಳುನಾಡು, ಕೇರಳದಿಂದ ಸಾವಿರಾರು ಮಂದಿ ಪ್ರವಾಸಿಗರು ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಆಗಮಿಸಿದ್ದರು. ಆದರೆ ಬೆಟ್ಟಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಿರುವ ಕಾರಣ ಭಕ್ತಾದಿಗಳು ಹಾಗೂ ಪ್ರವಾಸಿಗರು ವಿಧಿಯಿಲ್ಲದೆ ವಾಪಸ್ ತೆರಳುತ್ತಿದ್ದಾರೆ. ಹಂಗಳ ಗ್ರಾಮದ ಪ್ರವೇಶ ದ್ವಾರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಂತು ಬಸ್ಗಳನ್ನು ವಾಪಸ್ ಕಳುಹಿಸಿದ್ದಾರೆ.
ಗುಂಡಿ ಮುಚ್ಚದ ಅಧಿಕಾರಿಗಳು : ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಕಳೆದ ಹಲವು ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಗುಂಡಿ ಬಿದ್ದಿತ್ತು. ಇದನ್ನು ದುರಸ್ತಿ ಪಡಿಸದೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿದ ಹಿನ್ನೆಲೆ ಇಂದು ಅದೇ ಗುಂಡಿಗಳು ದೊಡ್ಡದಾಗಿ ಮಾರ್ಪಾಡಾಗಿದೆ. ಈ ಕಾರಣದಿಂದ ಬೆಟ್ಟಕ್ಕೆ ಬಸ್ ಸಂಚಾರ ನಿಲ್ಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ : ನರಿಕಲ್ಲು ಮಾರಮ್ಮನ ಪವಾಡ: ಈ ಹೆದ್ದಾರಿಯ ಕಲ್ಲು ಪೂಜಿಸಿದ್ರೆ ಮಂಡಿ, ಕೀಲು ನೋವು ಮಾಯ!?