ಗುಂಡ್ಲುಪೇಟೆ (ಚಾಮರಾಜನಗರ): ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಬಂಡೀಪುರ ಸಫಾರಿ ಕೇಂದ್ರ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಇಷ್ಟು ದಿನ ಪ್ರವಾಸಿಗರಿಲ್ಲದೇ ಭಣಗುಡುತ್ತಿದ್ದವು. ಲಾಕ್ಡೌನ್ ಸಡಿಲವಾದ ಕಾರಣ ಇದೀಗ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸುತ್ತಲೂ ಮಂಜು ಕವಿದ ವಾತಾವರಣವಿದ್ದು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಇನ್ನು ಗೋಪಾಲಸ್ವಾಮಿ ದೇವಾಲಯಕ್ಕೆ ಪೂಜೆಗೆಂದು ಬಂದವರು ಮಂಜಿನಿಂದ ಆವೃತವಾಗಿರುವ ಬೆಟ್ಟದ ಸೌಂದರ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದರಿಂದ ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಗೋಪಾಲಸ್ವಾಮಿ ಬೆಟ್ಟ ಸಮುದ್ರ ಮಟ್ಟದಿಂದ 4,800 ಅಡಿ ಎತ್ತರದಲ್ಲಿರುವುದರಿಂದ ಮಳೆಗಾಲದಲ್ಲಿ ಸದಾ ಮಂಜಿನಿಂದ ಆವೃತವಾಗಿರುತ್ತದೆ. ದೇವಸ್ಥಾನ ಸುತ್ತಮುತ್ತಲಿನ ಜಾಗದಲ್ಲಿ ಆನೆ ಹಾಗೂ ಜಿಂಕೆಗಳು ಹೆಚ್ಚಾಗಿ ಕಂಡುಬರುತ್ತವೆ. ಇದೀಗ ಈ ಭಾಗದಲ್ಲಿ ಹುಲಿಯೊಂದು ಸಂಚಾರ ಮಾಡುತ್ತಿದ್ದು, ಅನೇಕ ಪ್ರವಾಸಿಗರು ನೋಡಿದ್ದಾರೆ. ಈ ಎಲ್ಲಾ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.
ಮೊದಲಿನಂತೆ ಅಲ್ಲದಿದ್ದರೂ ಬಂಡೀಪುರ ಸಫಾರಿ ಚೇತರಿಕೆ ಕಂಡಿದೆ. ಜಿಪ್ಸಿ ಮತ್ತು ವ್ಯಾನ್ಗಳು ಭರ್ತಿಯಾಗುತ್ತಿವೆ. ವಾರಾಂತ್ಯದಲ್ಲಿ ಸುಮಾರು 2 ರಿಂದ 2.5 ಲಕ್ಷದ ವರೆಗೆ ಆದಾಯ ಬರುತ್ತಿದೆ. ಹಿಂದೆ ವಾರಾಂತ್ಯದಲ್ಲಿ ಸಫಾರಿಗೆ ತೆರಳಲು ಟಿಕೆಟ್ ಸಿಗುತ್ತಿರಲಿಲ್ಲ. ಪ್ರತಿದಿನ 4 ರಿಂದ 5 ಲಕ್ಷದ ವರೆಗೆ ಆದಾಯ ಬರುತ್ತಿತ್ತು. ಕೊರೊನಾದಿಂದ ಸ್ವಲ್ಪ ಆದಾಯ ಕಡಿಮೆಯಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್.