ಚಾಮರಾಜನಗರ: ದೀಪಾವಳಿ ಹಬ್ಬದ ನಿಮಿತ್ತ ಸಾಲುಸಾಲು ರಜೆ ಹಿನ್ನೆಲೆ ಬಂಡೀಪುರ ಸಫಾರಿ ಕೇಂದ್ರಕ್ಕೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಬಂಡೀಪುರ ಸಫಾರಿ ಕೌಂಟರ್, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಸುತ್ತಮುತ್ತಲಿನ ರೆಸಾರ್ಟ್‌ಗಳು ಪ್ರವಾಸಿಗರಿಂದ ಗಿಜಿಗುಡುತ್ತಿತ್ತು. ಕಳೆದ ಎರಡು ದಿನಗಳಿಂದ ಚಿರತೆ, ಆನೆ ಹಿಂಡು, ಸೀಳುನಾಯಿಗಳು ಸಹ ಕಾಣಸಿಕ್ಕಿವೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಿಮಚ್ಛಾದಿತವಾಗಿ ಕಣ್ಮನಗಳಿಗೆ ಹಬ್ಬ ಉಂಟುಮಾಡುತ್ತಿದೆ. ಈ ಪ್ರಕೃತಿ ಸೌಂದರ್ಯ ಸವಿಯಲು ಸಾವಿರಾರು ಪ್ರವಾಸಿಗರು ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸಿದ್ದರು.
ಆನ್ಲೈನ್ ನಲ್ಲಿ ಸಫಾರಿಗಾಗಿ ಜಿಪ್ಸಿಯನ್ನು ಬುಕ್ ಮಾಡುವ ಅವಕಾಶ ಕಲ್ಪಿಸಬೇಕು. ಜೊತೆಗೆ ಜಿಪ್ಸಿಗಳ ಸಂಖ್ಯೆಯನ್ನು ಹೆಚ್ಚು ಮಾಡಬೇಕು. ವಾತಾವರಣ ಮತ್ತು ಸಫಾರಿಯೂ ಚೆನ್ನಾಗಿದ್ದು, ಮೂಲಸೌಕರ್ಯವೂ ಇರುವುದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಚಿಂತಾಮಣಿಯಿಂದ ಬಂದಿದ್ದ ಪ್ರವಾಸಿಗ ಡಾ.ಶ್ರೀನಿವಾಸ್ ತಿಳಿಸಿದರು.
ಸತತ ಮಳೆಯಾಗಿ ಬಂಡೀಪುರದಲ್ಲಿ ಕೆರೆ, ಕಟ್ಟೆ ತುಂಬಿರುವುದರಿಂದ ಪ್ರಾಣಿಗಳ ಹೆಚ್ಚಿನ ದರ್ಶನವಾಗದೇ ಕೆಲವರು ಬೇಸರಿಸಿದ್ದು ಕಂಡುಬಂದಿತು. ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರಿಂದ ವ್ಯಾನ್ ಗಳು ಹೆಚ್ಚುವರಿ ಟ್ರಿಪ್ ಗಳನ್ನು ಮಾಡಿದವು.