ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರ ಆದೇಶದಂತೆ ಗಣಿಗಾರಿಕೆ ಸ್ಥಳಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ದಕ್ಷಿಣ ವಲಯ ಜಂಟಿ ನಿರ್ದೇಶಕ ಮಹಾಂತೇಶ್ ತಿಳಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕರಿಕಲ್ಲು ಮತ್ತು ಬಿಳಿಕಲ್ಲು ಗಣಿಗಾರಿಕೆ ಎರಡೂ ಸೇರಿದಂತೆ ಒಟ್ಟು 166 ಕಲ್ಲು ಕ್ವಾರಿಗಳು ಇವೆ. ಇವುಗಳಲ್ಲಿ ಈಗಾಗಲೇ 52 ಸ್ಥಳಗಳಿಗೆ ಭೇಟಿ ನೀಡಿದ್ದು, ಇನ್ನೆರಡು ದಿನಗಳಲ್ಲಿ ತಪಾಸಣೆ ಕಾರ್ಯ ಬಹುತೇಕ ಮುಕ್ತಾಯಗೊಳ್ಳಲಿದೆ. ನಾಳೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ವರದಿ ಸಲ್ಲಿಸಲಾಗುವುದು ಎಂದು ಇವರು ಹೇಳಿದ್ದಾರೆ.
ಗಣಿಗಾರಿಕೆಯ ಸ್ಥಳಗಳನ್ನು ಪರಿಶೀಲನೆ ಮಾಡಲಾಗಿ, ಯಾರೂ ಅಪಾಯಕಾರಿ ಮಟ್ಟದಲ್ಲಿ ಅಸುರಕ್ಷಿತವಾಗಿ ಗಣಿಗಾರಿಕೆ ನಡೆಸುತ್ತಿಲ್ಲ ಎಂದು ತಿಳಿದು ಬಂದಿದೆ. ಇನ್ನೂ ಎಲ್ಲಿಯಾದರೂ ನಿಯಮ ಉಲ್ಲಂಘಿಸಿದ್ದು, ಕಂಡುಬಂದರೆ ಅಂತವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಕೆಲವು ಕಡೆಗಳಲ್ಲಿ ಗಣಿ ಮಾಲೀಕರಿಗೆ ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸೂಚನೆ ಕೊಡಲಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ, ಕೆಲವೆಡೆ ಅಧಿಕಾರಿಗಳ ಗಮನಕ್ಕೆ ಬಾರದೇ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಅವರು, ಹೊಸದಾಗಿ ಕಲ್ಲು ದಿಮ್ಮಿಗಳನ್ನು ಯಾರೂ ತೆಗೆಯುತ್ತಿಲ್ಲ, ಆದರೆ, ಈಗಾಗಲೇ ತೆಗೆದಿರುವ ದಿಮ್ಮಿಗಳನ್ನು ಡ್ರೆಸ್ಸಿಂಗ್ ಮಾಡುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಓದಿ : ಮಾದಪ್ಪನ ಬೆಟ್ಟದಲ್ಲಿ ಭಕ್ತ ಸಾಗರ, ಎರಡು ದಿನಗಳಲ್ಲಿ 20 ಲಕ್ಷ ರೂ. ಆದಾಯ!