ಕೊಳ್ಳೇಗಾಲ: ಹಳೇ ವೈಷ್ಯಮದ ಹಿನ್ನೆಲೆ ಬೈಕ್ನಲ್ಲಿ ತೆರಳುತ್ತಿದ್ದ ಅಣ್ಣ-ತಂಗಿಯ ಮೇಲೆ ಕಿಡಿಗೇಡಿಗಳು ಮಾರಾಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದ ನಿವಾಸಿ ನಿಶಾಂತ್, ನಿವೇದಿತಾ (ಅಣ್ಣ-ತಂಗಿ) ಹಲ್ಲೆಗೊಳಗಾದವರು. ಕೆಸ್ತೂರು ಗ್ರಾಮದ ನಾಗೇಶ್, ನಟರಾಜು, ಮಹೇಶ್ ಬಂಧಿತ ಆರೋಪಿಗಳಾಗಿದ್ದಾರೆ.
ಜೂನ್ 18(ನಿನ್ನೆ) ರಂದು ಸಂಜೆ 4:30 ರ ಹೊತ್ತಿಗೆ ನಿಶಾಂತ್ ಹಾಗೂ ನಿವೇದಿತಾ ಕಾರ್ಯನಿಮಿತ್ತ ಕೊಳ್ಳೇಗಾಲದ ಕಡೆಗೆ ತೇರಂಬಳ್ಳಿ ರಸ್ತೆ ಮಾರ್ಗವಾಗಿ ಬರುವಾಗ ಹಿಂದೆಯಿಂದ ಬಂದ ಆರೋಪಿಗಳು ಬೈಕ್ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈಯ್ದು ಸ್ಥಳದಲ್ಲಿ ಸಿಕ್ಕ ದೊಣ್ಣೆಯಿಂದ ನಿಶಾಂತ್ ತಲೆಗೆ ಹೊಡೆದಿದ್ದು ಬಿಡಿಸಲು ಬಂದ ಸಹೋದರಿ ನಿವೇದಿತಾಳನ್ನು ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಪೊಲೀಸರಿಗೆ ನಿಶಾಂತ್ ದೂರು ನೀಡಿದ್ದಾರೆ.
ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರ ಮೇಲೆ ಜಾತಿ ನಿಂದನೆಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.