ಚಾಮರಾಜನಗರ: ವಿಧಿಯಾಟಕ್ಕೆ ಹೊಣೆಯಾರು ಎಂಬಂತೆ ಮುಪ್ಪಿನ ವಯಸ್ಸಿನಲ್ಲಿ 6 ದಿನದ ಅಂತರದಲ್ಲಿ ಇಬ್ಬರು ಮಕ್ಕಳು ಹಾಗೂ ಮೊಮ್ಮಗನನ್ನ ಕಳೆದುಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ.
ಹಂಗಳ ಗ್ರಾಮದ ಸಿದ್ದಯ್ಯ ಮತ್ತು ರಾಚಮ್ಮ ಎಂಬವರ ಮಗ ಶಿವಶಂಕರ್(30) ಮೃತಪಟ್ಟ ಮಾರನೇ ದಿನವೇ ಮೊಮ್ಮಗ ನಿರಂಜನಕುಮಾರ್(9) ಹಾಗೂ ಇಂದು ಮಗಳು ನಿಂಗರಾಜಮ್ಮ (27) ಮೃತಪಟ್ಟಿದ್ದಾರೆ.
ಶಿವಶಂಕರ್ ಮೆದುಳು ಜ್ವರದಿಂದ ಖಾಸಗಿ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆ ಫಲಕಾರಿಯಾಗದೇ 6 ದಿನಗಳ ಹಿಂದೆ ಮೃತಪಟ್ಟಿದ್ದರು. ಇದಾದ ಮಾರನೇ ದಿನವೇ ನಿಂಗರಾಜಮ್ಮನ ಮಗ ನಿರಂಜನ್(9) ಸತತ ವಾಂತಿ ಮಾಡಿಕೊಂಡು ಅಸುನೀಗಿದ್ದ. ಅಣ್ಣ ಮತ್ತು ಮಗನನ್ನು ಕಳೆದುಕೊಂಡ ಖಿನ್ನತೆಯಲ್ಲಿದ್ದ ನಿಂಗರಾಜಮ್ಮ ಇಂದು ರಕ್ತದೊತ್ತಡದ ಏರು ಪೇರಿನಿಂದ ಮೃತಪಟ್ಟಿದ್ದಾರೆ.
ಒಂದು ವಾರದಲ್ಲೇ ಮಗ, ಮಗಳು, ಮೊಮ್ಮಗನನ್ನು ಕಳೆದುಕೊಂಡ ಹಿರಿ ಜೀವಗಳು ಕಂಗಾಲಾಗಿದ್ದಾರೆ. ಇದರ ನಡುವೆ, ಸಾವಿನ ಸುದ್ದಿ ಕೇಳಿ ತಾಯಿ ರಾಚಮ್ಮನೂ ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.