ಚಾಮರಾಜನಗರ : ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳೆದ ಕೆಲವು ದಿನಗಳಿಂದ ಮಗುವಿನಹಳ್ಳಿ ಗ್ರಾಮದ ಜನರು ವಿದ್ಯುತ್ ಇಲ್ಲದೆ, ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿರುವ ಮಗುವಿನಹಳ್ಳಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಗ್ರಾಮವು ಕಾಡಿಗೆ ಹೊಂದಿಕೊಂಡಿರುವುದರಿಂದ ಪ್ರಾಣಿಗಳ ಹಾವಳಿ ಹೆಚ್ಚಿದ್ದು, ಈ ನಡುವೆ ವಿದ್ಯುತ್ ಇಲ್ಲದಿರುವುದು ಜನರನ್ನು ಹೈರಾಣಾಗಿಸಿದೆ.
ಅಪಘಾತದಿಂದ ವಿದ್ಯುತ್ ವ್ಯತ್ಯಯ : ಕಳೆದ ಕೆಲವು ದಿನಗಳ ಹಿಂದೆ ಆಟೋವೊಂದು ಗ್ರಾಮದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ವಿದ್ಯುತ್ ಕಂಬ ಮುರಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದರೆ, ವಿದ್ಯುತ್ ಕಡಿತಗೊಳಿಸಿದ ಸಿಬ್ಬಂದಿ ಕಂಬ ಸರಿಪಡಿಸದೇ ನಿರ್ಲಕ್ಷ್ಯ ತೋರಿದ್ದಾರೆ.
ಕುಡಿಯಲು ದೂರದ ಜಮೀನುಗಳಿಂದ ನೀರು ತರಬೇಕಾದ ಪರಿಸ್ಥಿತಿ ಎದುರಾಗಿದೆ. ವಿದ್ಯುತ್ ಕಂಬ ಮುರಿದ ತಕ್ಷಣ ಚೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಿದ್ರೂ ಕಂಬ ಬದಲಿಸುವುದಕ್ಕೆ ತಡ ಮಾಡುತ್ತಿದ್ದಾರೆ. ಈ ಕೂಡಲೇ ಗ್ರಾಮದ ವಿದ್ಯುತ್ ಸಮಸ್ಯೆ ಸರಿಪಡಿಸದಿದ್ದರೆ ಪ್ರತಿಭಟನೆ ಕೈಗೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಕಾಡಂಚಿನ ಜನರ ಸಮಸ್ಯೆ ನಗರ ಮತ್ತು ಪಟ್ಟಣದಲ್ಲಿ ವಾಸಿಸುವವರಿಗೆ ಅರಿವಾಗುವುದಿಲ್ಲ. ಕಂಬ ಬದಲಿಸಲು ಮೂರು ದಿನ ಮಾಡುತ್ತಾರೆ. ಹಣವುಳ್ಳವರು ಸಮಸ್ಯೆ ಹೇಳಿದರೆ ತಕ್ಷಣ ಬದಲಿಸುತ್ತಾರೆ ಎಂದು ಪಂಚಾಯತ್ ಸದಸ್ಯ ಚಿನ್ನಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ : ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿಯರ ಪರದಾಟ: ಬದಲಾಗದ ಆಸ್ಪತ್ರೆಯ ಅವ್ಯವಸ್ಥೆ!