ಚಾಮರಾಜನಗರ: ಕಳೆದ 18 ದಿನ ಕಾರ್ಯಾಚರಣೆ ನಡೆಸಿದರು ನರಭಕ್ಷಕ ಹುಲಿ ಪತ್ತೆಯಾಗದಿರುವುದರಂದ ಅರಣ್ಯ ಇಲಾಖೆ ಗುಂಡ್ಲುಪೇಟೆ ತಾಲೂಕಿನ ಹುಂಡಿಪುರದಲ್ಲಿ ಗ್ರಾಮಸ್ಥರ ಸಭೆ ನಡೆಸಿತು.
ಜನರ ಕಣ್ಣಿಗೆ ಕಾಣುತ್ತಿರುವ ಹುಲಿರಾಯ ಅರಣ್ಯ ಇಲಾಖೆಗೇಕೆ ಕಾಣುತ್ತಿಲ್ಲ ಎಂಬ ಗ್ರಾಮದ ಯುವಕರ ಪ್ರಶ್ನೆಗೆ, ಅರಣ್ಯಾಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಮಳೆಯಾಗಿದ್ದರೂ ಹುಲಿ ಹೆಜ್ಜೆ ಗುರುತು ಸುತ್ತಮುತ್ತ ಎಲ್ಲೂ ಸಿಕ್ಕಿಲ್ಲವಾದ್ದರಿಂದ ಹುಲಿ ಓಡಾಟ ಇಲ್ಲ ಎಂದು ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಹೇಳಿದರು.
ಅಭಿಮನ್ಯು ಆನೆ ಮತ್ತು ಡ್ರೋಣ್ ಕ್ಯಾಮರಾ ಬಳಸಿದರೂ ಹುಲಿ ಪತ್ತೆಯಾಗದಿರುವುದರಿಂದ ಇನ್ನು 10 ದಿನ ಕೂಂಬಿಂಗ್ ನಡೆಸಲಿದ್ದು, ಬಳಿಕ ಕಾರ್ಯಾಚರಣೆಯಲ್ಲಿದ್ದ ಸಿಬ್ಬಂದಿಗಳು ತಮ್ಮ ತಮ್ಮ ವಲಯಗಳಿಗೆ ವಾಪಾಸಾಗಲಿದ್ದಾರೆ ಎಂದು ಅರಣ್ಯ ಇಲಾಖೆ ಈ ಟಿವಿ ಭಾರತಕ್ಕೆ ಮಾಹಿತಿ ನೀಡಿದೆ.
ಕೆಲವು ದಿನಗಳ ಹಿಂದೆಯಷ್ಟೆ ಚೌಡಹಳ್ಳಿ ಗ್ರಾಮದ ಶಿವಮಾದಯ್ಯ ಎಂಬವವರನ್ನು ಪ್ರಾಣಿಯೊಂದು ತಿಂದು ಹಾಕಿತ್ತು. ಗ್ರಾಮಸ್ಥರು ಹುಲಿ ತಿಂದಿದೆ ಎಂದು ವಾದಿಸಿದರೇ ಅರಣ್ಯ ಇಲಾಖೆ ಚಿರತೆ ಕೊಂದಿದೆ ಎಂದು ಶಂಕಿಸಿದ್ದಾರೆ. ಒಟ್ಟಿನಲ್ಲಿ ಕಳೆದ 1 ವರ್ಷದಿಂದ ಹುಂಡಿಪುರ, ಕೆಬ್ಬೇಪುರ, ಚೌಡಹಳ್ಳಿ ಗ್ರಾಮದ ರೈತರು ಹುಲಿರಾಯನ ಆತಂಕದಲ್ಲೇ ದಿನದೂಡುತ್ತಿದ್ದಾರೆ.