ಚಾಮರಾಜನಗರ: ಹನೂರು ತಾಲೂಕಿನ ಲೊಕ್ಕನಹಳ್ಳಿ ಸಮೀಪದ ಸಿದ್ದಪ್ಪಾಜಿ ದೇಗುಲದಲ್ಲಿ ಕಾರ್ತಿಕ ಮಾಸದ ಕೊನೆಯ ಸೋಮವಾರ ಪ್ರಯುಕ್ತ ವಿಶೇಷ ಪೂಜೆ ನೆರವೇರಿದೆ. ಈ ವೇಳೆ ಕುದಿಯುವ ಎಣ್ಣೆಗೆ ಅರ್ಚಕ ಕೈ ಹಾಕಿ ಕಜ್ಜಾಯವನ್ನು ತೆಗೆದು ಅಚ್ಚರಿ ಮೂಡಿಸಿದ್ದಾರೆ.
ದೇವಾಲಯದಲ್ಲಿ ವಾದ್ಯ ಮೇಳದೊಂದಿಗೆ ಕಂಡಾಯ ಹೊತ್ತ ಅರ್ಚಕ ಸಿದ್ದರಾಜು, ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಕುಣಿಯುತ್ತ ಬಂದು ಕುದಿಯುತ್ತಿದ್ದ ಎಣ್ಣೆಗೆ ಕೈ ಹಾಕಿ 3 ಬಾರಿ ಕಜ್ಜಾಯವನ್ನು ಎತ್ತಿದ್ದಾರೆ. ಜೊತೆಗೆ ನೆರೆದಿದ್ದ ಭಕ್ತರ ಮೇಲೂ ಕುದಿಯುವ ಎಣ್ಣೆಯನ್ನು ಎರಚಿದ್ದಾರೆ. ಈ ವೇಳೆ ಅರ್ಚಕರ ಕೈ ಸುಡದೇ ಇರುವುದು ಅಚ್ಚರಿ ಮೂಡಿಸಿದೆ.
ಏನಿದು ಚಮತ್ಕಾರ.. ವೈಜ್ಞಾನಿಕವಾಗಿ ಈ ತಂತ್ರದ ಬಗ್ಗೆ ತಿಳಿಯುವುದಾದರೆ ಕೈಗೆ ಮೊದಲು ತಣ್ಣನೆಯ ಎಣ್ಣೆ ಮತ್ತು ನಿಂಬೆಹಣ್ಣಿನ ರಸ ಹಚ್ಚಿಕೊಂಡು ಹೀಗೆ ಕುದಿಯುವ ಎಣ್ಣೆಯಲ್ಲಿ ಕೈ ಅದ್ದಬಹುದು. ಬಹುಶಃ ಈ ಅರ್ಚಕ ಇದೇ ವೈಜ್ಞಾನಿಕ ತಂತ್ರವನ್ನು ಅನುಸರಿಸಿರಬಹುದು. ಏಕೆಂದರೆ, ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲ ಕುದಿಯುವ ಎಣ್ಣೆಯ ಶಾಖವನ್ನು ಹೀರಿಕೊಳ್ಳುತ್ತದೆ. ಆಗ ಕೈಗೆ ಶಾಖ ತಗುಲುವುದಿಲ್ಲ ಎನ್ನಲಾಗ್ತಿದೆ.
ಸೂಚನೆ: ನೀವು ಕೂಡ ಇದರಿಂದ ಪ್ರೇರಿತರಾಗಿ ಇಂತಹ ಪ್ರಯತ್ನಕ್ಕೆ ಮುಂದಾಗಬೇಡಿ. ಏಕೆಂದರೆ ಇದಕ್ಕೆ ಪರಿಣಿತರ ಸಲಹೆ ಮತ್ತು ವೈಜ್ಞಾನಿಕ ತಿಳುವಳಿಕೆ ಸಹ ಮುಖ್ಯವಾಗಿರುತ್ತೆ. ಒಮ್ಮೆಲೆ ಈ ರೀತಿ ಮಾಡಲು ಮುಂದಾದರೆ ಕೈಸುಡುವುದಲ್ಲದೆ, ಬೊಬ್ಬೆ ಬಂದು ನರಳಾಡುವ ಪರಿಸ್ಥಿತಿ ಎದುರಾಗುತ್ತೆ.
ಇದನ್ನೂ ಓದಿ: ಸಿಹಿ ಜೇನು ಸಾಮಾನ್ಯ.. ಬಿಳಿಗಿರಿ ಬನದಲ್ಲಿ ಸಿಗುತ್ತಿದೆ ಕಹಿ ಜೇನು