ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲದಲ್ಲಿ ಆನೆಯ ಮುಖಕ್ಕೆ ಗುಂಡಿಕ್ಕಿದ ಪ್ರಕರಣದಲ್ಲಿ ಅರಣ್ಯ ಇಲಾಖೆಯು ತಾತ್ಸಾರ ಹಾಗೂ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಈಗ ಕೇಳಿಬರುತ್ತಿದೆ.
ಗಸ್ತಿನಲ್ಲಿದ್ದ ಇಲಾಖೆ ನೌಕರ ರಹೀಂ ಎಂಬಾತ ಆನೆಯ ಮುಖಕ್ಕೆ ಗುಂಡು ಹೊಡೆದಿದ್ದಕ್ಕೆ ಅಮಾನತಾಗಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. ಆದರೆ, ಘಟನೆಯ ವಿಡಿಯೋ ಮಾಡಿದ ಮತ್ತು ಹೊರ ಗುತ್ತಿಗೆ ನೌಕರ ಉಮೇಶ್ ಎಂಬ ವಾಚರ್ ನನ್ನು ಕೆಲಸದಿಂದಲೇ ವಜಾ ಮಾಡಿ ಅರಣ್ಯ ಇಲಾಖೆ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂಬುದು ಪರಿಸರಪ್ರೇಮಿಗಳ ಆರೋಪ.
ಬೆಳೆ ರಕ್ಷಣೆಗಾಗಿ ಬೇಲಿ ಹಾಕಿಕೊಂಡ ರೈತನ ಜಮೀನಿಗೆ ಬಂದ ಆನೆ ಸಾವನ್ನಪಿದ್ದರೆ ಆತನ ಮೇಲೆ ವನ್ಯ ಜೀವಿ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ ಜೈಲಿಗೆ ತಳ್ಳುತ್ತಾರೆ, ಆದರೆ ಅರಣ್ಯ ಇಲಾಖೆ ನೌಕರನೇ ಆನೆಗೆ ಗುಂಡಿಕ್ಕಿ ಕೊಲ್ಲುವ ಪ್ರಯತ್ನ ಮಾಡಿದ್ದಾನೆ. ಅವನಿಗೆ ಕೇವಲ ಅಮಾನತು ಶಿಕ್ಷೆಯೇ ಎಂದು ಕೊಳ್ಳೇಗಾಲದ ಪರಿಸರಪ್ರೇಮಿ ಮಲ್ಲಪ್ಪ ಆಕ್ರೋಶ ಹೊರಹಾಕಿದ್ದಾರೆ.
ತರಬೇತಿ ಅವಶ್ಯಕ: ಆನೆಯ ಮುಖಕ್ಕೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರವಾದಿ ಜೋಸೆಫ್ ಹೂವರ್ ಈಟಿವಿ ಭಾರತದೊಂದಿಗೆ ಮಾತನಾಡಿ ,ಅರಣ್ಯ ಇಲಾಖೆ ಯಾರ್ಯಾರನ್ನೋ ಕೆಲಸಕ್ಕೆ ತೆಗೆದುಕೊಳ್ಳುತ್ತಿರುವುದರಿಂದ ಈ ರೀತಿ ಅವಗಢ ಆಗುತ್ತಿದೆ. ಯಾವ ರೀತಿ ಅವರು ಪ್ರಾಣಿಗಳೊಂದಿಗೆ ವರ್ತಿಸಬೇಕು ಎಂಬುದರ ಒಂದು ತರಬೇತಿ ನೀಡಬೇಕು ಎಂದಿದ್ದು, ಆನೆಗೆ ಗುಂಡು ಹಾರಿಸುವ ಅಗತ್ಯವೇ ಇರಲಿಲ್ಲ, ರೈಲ್ವೆ ಕಂಬಿ ದಾಟಿ ಅದು ಬರುತ್ತಿರಲಿಲ್ಲ ,ಗುಂಡು ಹಾರಿಸಿದ ಬಳಿಕ ಅವರೆಲ್ಲಾ ಕೇಕೆ ಹಾಕಿ ಕಿರುಚುತ್ತಾರೆ ಎಂದು ಕಿಡಿಕಾರಿದ್ದಾರೆ.
ಒಂದು ವೇಳೆ ಆತ ಹಾರಿಸಿದ ಗುಂಡಿನಿಂದ ಆನೆಯೇನಾದರೂ ಗಾಯಗೊಂಡಿದ್ದರೇ ಪ್ರಾಣಿ-ಮಾನವ ಸಂಘರ್ಷಕ್ಕೆ ಎಡೆ ಮಾಡಿ ಕೊಡುತ್ತಿತ್ತು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.