ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿರುವ ಘಟನೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸಮೀಪದ ಮೆದಗನಾಣೆ ಕ್ರಾಸ್ ಬಳಿ ನಡೆದಿದೆ.
ಮಲೆಮಹದೇಶ್ವರ ಬೆಟ್ಟದ ಪುದೂರು ಗ್ರಾಮದ ವೇಣು (38), ಬಾಲಾಜಿ (30), ಶಿವಮೂರ್ತಿ (38) ಹಾಗೂ ಕಾರ್ತಿಕ್ (34) ಬಂಧಿತ ಆರೋಪಿಗಳು. ಮ.ಬೆಟ್ಟದ ಜನತಾ ಕಾಲೋನಿಯ ರವಿ, ಕೀರನಹೊಲ ಗ್ರಾಮದ ರಂಗಸ್ವಾಮಿ, ಇದೇ ಗ್ರಾಮದ ಮತ್ತೊಬ್ಬ ರಂಗಸ್ವಾಮಿ, ಊರಬಸಪ್ಪನ ಒಡ್ಡಿನ ಕೆಂಪರಾಜು, ರಾಚಪ್ಪ ಹಾಗೂ ದೇವ ಎಂಬವರು ಪರಾರಿಯಾಗಿದ್ದಾರೆ.
ಮೆದಗನಾಣೆ ಕ್ರಾಸ್ ಬಳಿಯ ಮಲೆ ಮಹದೇಶ್ವರ ವನ್ಯಜಿವಿ ಧಾಮಕ್ಕೆ ಸೇರಿದ ಅರಣ್ಯ ಪ್ರದೇಶದಲ್ಲಿ 9 ಜನರ ತಂಡ ಜೂಜಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಮಲೆಮಹದೇಶ್ವರ ಬೆಟ್ಟ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿ ಪಣಕ್ಕಿಟ್ಟಿದ್ದ 5,200 ರೂ. ವಶಪಡಿಸಿಕೊಂಡಿದ್ದಾರೆ.
ಭಕ್ತರ ಸೋಗಲ್ಲಿ ಜೂಜುಕೋರರು ಮಲೆಮಹದೇಶ್ವರ ಬೆಟ್ಟ ಸುತ್ತಮುತ್ತ ಇಸ್ಪೀಟ್ ಆಡುತ್ತಿದ್ದಾರೆಂದು ಮಂಗಳವಾರವಷ್ಟೇ ಈಟಿವಿ ಭಾರತ ವರದಿ ಬಿತ್ತರಿಸಿ ಗಮನ ಸೆಳೆದಿತ್ತು.