ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಪ್ರಥಮ ಕಾಲೇಜು ಸ್ಥಳಾಂತರ ಖಂಡಿಸಿ ವಿದ್ಯಾರ್ಥಿಗಳು, ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ಆದರೆ, ಕಳೆದ ಗುರುವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಓರ್ವ ವಿದ್ಯಾರ್ಥಿನಿ (ಪೊಲೀಸ್ ಸಿಬ್ಬಂದಿ ಮಗಳು) ನಾಪತ್ತೆಯಾಗಿರುವ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ತೆರಕಣಾಂಬಿ ಪೊಲೀಸರು ಮಾನಸಿಕ ಕಿರುಕುಳ ನೀಡುತ್ತಿದ್ದು, ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆಂದು ರಕ್ಷಿತಾ ಎಂಬ ವಿದ್ಯಾರ್ಥಿನಿ ಆರೋಪಿಸಿದ್ದಾರೆ.
ಅನಗತ್ಯವಾಗಿ ನಮ್ಮನ್ನು ವಿಚಾರಿಸಿ, ಮನೆ ಮುಂದೆ ಪೊಲೀಸರನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ. ಈ ಹೋರಾಟ ಏನಾದರೂ ನಿಂತರೆ ಪೊಲೀಸರೇ ಕಾರಣರಾಗುತ್ತಾರೆ ಎಂದು ಪ್ರತಿಭಟನಾನಿರತ ಹೋರಾಟಗಾರರು ಆರೋಪಿಸಿದ್ದಾರೆ.
ಇಂದಿನ ಪ್ರತಿಭಟನೆಯಲ್ಲಿ ರೈತ ಸಂಘದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಲಕ್ಷ್ಮೀ ವರದರಾಜಸ್ವಾಮಿ ದೇವಾಸ್ಥಾನದಿಂದ ಆಂಜನೇಯ ಸ್ವಾಮಿ ವೃತ್ತದವರೆಗೆ ಮಾನವ ಸರಪಳಿ ರಚಿಸಿ ಕಾಲೇಜನ್ನು ಸ್ಥಳಾಂತರಿಸದಂತೆ ಒತ್ತಾಯಿಸಿದರು.