ಚಾಮರಾಜನಗರ: ಕಾವೇರಿ ನೀರನ್ನು ಹರಿಸುತ್ತಿರುವುದನ್ನು ಖಂಡಿಸಿ ತಮಿಳುನಾಡು, ರಾಜ್ಯ ಸರ್ಕಾರದ ಅಣಕು ಶವಯಾತ್ರೆ ನಡೆಸಿ ಕಬ್ಬು ಬೆಳೆಗಾರರು ಚಾಮರಾಜನಗರದಲ್ಲಿ ಆಕ್ರೋಶ ಹೊರಹಾಕಿದರು. ಕಬ್ಬು ಬೆಳೆಗಾರರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಚಾಮರಾಜೇಶ್ವರ ದೇವಾಲಯದಿಂದ ಭುವನೇಶ್ವರಿ ವೃತ್ತದ ತನಕ ಚಟ್ಟ, ಬೆಂಕಿ ಹಿಡಿದು ಅಣಕು ಶವಯಾತ್ರೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ತಡೆದು ಬಾಯಿ ಬಡಿದುಕೊಂಡು ಕೇಂದ್ರ, ರಾಜ್ಯ ಹಾಗೂ ತಮಿಳುನಾಡು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಶಾಸಕರು, ಸಂಸದರು ರೈತರ ಪಾಲಿಗೆ ಮೃತಪಟ್ಟಿದ್ದು, ಅನ್ನದಾತರಿಗೆ ಆತ್ಮಹತ್ಯೆ ಭಾಗ್ಯವನ್ನು ಕೊಡುತ್ತಿದ್ದಾರೆ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆ ನಡೆಸಿದ್ದರಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಅಣಕು ಶವಯಾತ್ರೆ ನಡೆಸಿದ ಬಳಿಕ ಕಬ್ಬು ಬೆಳೆಗಾರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಇಂಡಿಯಾ ಒಕ್ಕೂಟ ಉಳಿಸಿಕೊಳ್ಳಲು, ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ನಡುವೆ ಒಳ ಒಪ್ಪಂದ ಆಗಿದೆ. ರೌಡಿಗಳು, ಭ್ರಷ್ಟರು ಅಧಿಕಾರಕ್ಕೆ ಬಂದರೆ ಇದೇ ರೀತಿ ಆಗಲಿದೆ. ಅಧಿಕಾರಕ್ಕೆ ಬರುವ ಮೊದಲು ಮೊಸಳೆ ಕಣ್ಣೀರು ಹಾಕುತ್ತಿದ್ದರು. ರೈತರನ್ನು ರಕ್ಷಣೆ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದರು. ಈಗ ರಾಜ್ಯ ಸರ್ಕಾರ ರೈತರ ಹಿತ ಕಾಯುತ್ತಿಲ್ಲ ಎಂದು ಕಿಡಿಕಾರಿದರು.
ಮೊದಲು ಸಚಿವ ಸಂಪುಟದಿಂದ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ವಜಾ ಮಾಡಬೇಕು. ಇಂಡಿಯಾ ಒಕ್ಕೂಟದ ಕಾರಣಕ್ಕಾಗಿ ತಮಿಳುನಾಡಿಗೆ ನೀರು ಬಿಡುತ್ತೇವೆ ಎಂದು ಡಿಕೆಶಿ- ಸ್ಟಾಲಿನ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಮುಂದಿನ ಚುನಾವಣೆಗೆ I.N.D.I.A ವನ್ನು ತೃಪ್ತಿಪಡಿಸಲು ಡಿಕೆಶಿ ಹೊರಟಿದ್ದಾರೆ. I.N.D.I.A ತೃಪ್ತಿಪಡಿಸಲು ನೀವು ಹೊರಟರೆ, ಕರ್ನಾಟಕ ನಿಮಗೆ ತಕ್ಕ ಉತ್ತರ ನೀಡುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಲೋಕಸಭಾ ಚುನಾವಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಲಾಭಿ ಇದಾಗಿದೆ, ನಾವು ಬೆಳೆಗಳಿಗೆ ನೀರು ಕೇಳ್ತಿಲ್ಲ, ಕುಡಿಯೋಕೆ ನೀರು ಕೇಳುತ್ತಿದ್ದೇವೆ. ಅದಕ್ಕೂ ತಾಕತ್ತು ಇಲ್ಲ ಅಂದ್ರೆ, ಮುಂದಿನ ದಿನಗಳಲ್ಲಿ ಇನ್ನೇನು ಮಾಡುತ್ತೀರಾ ನೀವು?. ಹಿಂದೆ ಸಿದ್ದರಾಮಯ್ಯ ತೊಡೆ ತಟ್ಟಿದ್ದರು, ತೋಳು ತಟ್ಟಿದರು, ನಿಮಗೆ ತಾಕತ್ತು ಇದ್ರೆ ಈಗ ಪಾದಯಾತ್ರೆ ಮಾಡಿ. ತೊಡೆ ತಟ್ಟಿ, ಸರ್ವಪಕ್ಷ ಸಭೆಯಲ್ಲಿ ನೀರು ಬಿಡಲ್ಲ ಅಂತ ಹೇಳ್ತೀರಿ, ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶ ಮಾಡ್ತು ಅಂತ ನೀರು ಬಿಡ್ತಿರಿ, ಯಾಕೆ ಕದ್ದು ಮುಚ್ಚಿ ನಾಟಕ ಮಾಡ್ತೀರಿ. ರಾಜಕಾರಣಿಗಳೇ ರೈತರ ಪ್ರಾಣ, ಹಾಗೂ ಕುಡಿಯೋ ನೀರಿನ ಜತೆ ಚೆಲ್ಲಾಟ ಅಡ್ತಿದೀರಿ. ಮುಂದಿನ ದಿನಗಳಲ್ಲಿ ನೀವು ಮನೆಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಭೂತ ಬಿಡಿಸುವ ಚಳವಳಿ ನಡೆಸಿದ ಕನ್ನಡಪರ ಸಂಘಟನೆ: ಮತ್ತೊಂದೆಡೆ, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಭೂತ ಬಿಡಿಸುವ ಚಳವಳಿ ನಡೆಸಿದರು. ಚಾಮರಾಜೇಶ್ವರ ದೇವಾಲಯದಿಂದ ಭುವನೇಶ್ವರಿ ವೃತದ ತನಕ ಪ್ರತಿಭಟನೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬೇವಿನಸೊಪ್ಪು ಬಡಿದು ಕಿಡಿಕಾರಿದರು. ತಮಿಳುನಾಡು ಹಾಗೂ ಸಿಡಬ್ಲ್ಯೂಸಿಗೆ ನೀರಿನ ಭೂತ ಹಿಡಿದಿದ್ದು ಯಾವಾಗಲೂ ಕಾವೇರಿ ಕೊಡಿ, ಕೊಡಿ ಎಂದು ಕ್ಯಾತೆ ತೆಗೆಯುವುದರಿಂದ ಹಿಡಿದಿರುವ ಭೂತ ಬಿಡಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಕುಡಿಯುವ ನೀರಿಗಾಗಿ ಜೈಲಿಗೆ ಹೋಗಲೂ ರೆಡಿ: ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು