ಚಾಮರಾಜನಗರ: ಬಿ.ಎಸ್ ಯಡಿಯೂರಪ್ಪ ಪದತ್ಯಾಗದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ರವಿ ಅವರ ಮನೆಗೆ ಇಂದು ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಸಾಂತ್ವನ ಹೇಳಿದರು.
ಸ್ಥಳೀಯ ಶಾಸಕ ನಿರಂಜನ್ ಕುಮಾರ್ ಜೊತೆಗೂಡಿ ಮೃತರ ಮನೆಗೆ ಭೇಟಿ ನೀಡಿದ ಸಚಿವರು, ರವಿ ತಾಯಿ ದೇವಮ್ಮ ಅವರಿಗೆ ಧೈರ್ಯ ಹೇಳಿದರು. ಇನ್ನೆರಡು ಮೂರು ದಿನಗಳಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಬರಲಿದ್ದಾರೆ ಎಂದು ತಿಳಿಸಿದರು.
ಈ ರೀತಿ ಯಾವ ಕಾರ್ಯಕರ್ತರೂ ದುಡುಕಿ ನಿರ್ಧಾರ ಕೈಗೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸ್ಥಳದಲ್ಲಿ ಸೇರಿದ್ದ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು. ಇದಕ್ಕೂ ಮುನ್ನ ಶಾಸಕ ನಿರಂಜನಕುಮಾರ್ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದರು.
ಆಕ್ಸಿಜನ್ ದುರಂತದ ಟಾಂಗ್:
ಜಿಲ್ಲಾ ಕಾಂಗ್ರೆಸ್ನ ಸಾಮಾಜಿಕ ಜಾಲತಾಣ ಉಸ್ತುವಾರಿ ಸಯ್ಯದ್ ಮುಷೀಬ್ ಅವರು ಫೇಸ್ಬುಕ್ ಮೂಲಕ ಮಾಜಿ ಸಚಿವರಿಗೆ ಟಾಂಗ್ ಕೊಟ್ಟಿದ್ದು, ಕೇವಲ ಯಡಿಯೂರಪ್ಪ ಅವರ ಅಭಿಮಾನಿ ಮನೆಗಷ್ಟೇ ಭೇಟಿಯೇ..? ಆಕ್ಸಿಜನ್ ದುರಂತ ಸಂತ್ರಸ್ತರ ಮನೆಗೆ ಯಾವಾಗ ಬರುತ್ತೀರಿ, ಅಭಿಮಾನಿ ಜೀವ ಬೇರೆ- ಸಾಮಾನ್ಯರ ಜೀವ ಬೇರೇಯೇ..? ನಿಮ್ಮ ಭೇಟಿ ವಿರೋಧಿಸುತ್ತಿಲ್ಲ, ನೀವು ಉಸ್ತುವಾರಿ ಆಗಿದ್ದಾಗ ನಡೆದ ಘಟನೆಯ ಸಂತ್ರಸ್ತರ ಮನೆಗೇಕೆ ಭೇಟಿಯಿಲ್ಲ ಎಂಬುದು ನಮ್ಮ ಪ್ರಶ್ನೆ ಎಂದು ಕಿಡಿಕಾರಿದ್ದಾರೆ.
ಸುರೇಶ್ ಕುಮಾರ್ ಅವರ ವಾಲಿನಲ್ಲೇ ಜೋಗೆಗೌಡ ಎಂಬವರು ಮಾಜಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದು, ಆಕ್ಸಿಜನ್ ದುರಂತದಲ್ಲಿ ಮಡಿದವರ ಸರಿಯಾದ ಪಟ್ಟಿಯಿಲ್ಲ, ಪರಿಹಾರ ಇಲ್ಲವೆಂದು ಕಿಡಿಕಾರಿದ್ದಾರೆ.
ಬಿಎಸ್ವೈ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಹೊತ್ತಿದ್ದರು. ಕಳೆದ ಮೇ 2ರ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಆ್ಯಕ್ಸಿಜನ್ ಕೊರತೆಯಿಂದ 36 ಮಂದಿ ಕೊರೊನಾ ಸೋಂಕಿತರು ಅಸುನೀಗಿದ್ದರು.