ಚಾಮರಾಜನಗರ: ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಮೂರನೇ ಶಾಲಾ ವಾಸ್ತವ್ಯ ಕೈಗೊಂಡಿದ್ದರು. ಹನೂರು ತಾಲೂಕಿನ ಪಚ್ಚೆದೊಡ್ಡಿಯಲ್ಲಿ ಗ್ರಾಮದ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಸಚಿವರು ಸಾರ್ವಜನಿಕರ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರದ ಭರವಸೆ ನೀಡಿದ್ರು.
ಪಚ್ಚೆದೊಡ್ಡಿ ಶಾಲೆಯಲ್ಲಿ ಸಚಿವ ಸುರೇಶ್ ಕುಮಾರ್ ವಾಸ್ತವ್ಯ, ರಸ್ತೆ, ಆ್ಯಂಬುಲೆನ್ಸ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರದ ಭರವಸೆ! ಪಚ್ವೆದೊಡ್ಡಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆ ಮಾತ್ರವಿದ್ದು, ಹಿರಿಯ ಹಾಗೂ ಪ್ರೌಢಶಾಲಾ ಶಿಕ್ಷಣಕ್ಕೆ 7-8 ಕಿಮೀ ಅಜ್ಜೀಪುರ, ಕಾಂಚಳ್ಳಿಗೆ ನಡೆದೇ ತೆರಳುವ ಸಮಸ್ಯೆಗೆ 10-15 ದಿನಗಳಲ್ಲಿ ಅರಣ್ಯ ಇಲಾಖೆಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ವಾಹನದ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ರು. ಪಡಿತರ ತರಲು ಕೂಡ ಕಾಂಚಳ್ಳಿಗೆ ನಡೆದೇ ಹೋಗಬೇಕಾದ ಪರಿಸ್ಥಿತಿ ಅರಿತ ಅವರು ವಾರಕ್ಕೆ ಎರಡು ಬಾರಿ ಸಂಚಾರಿ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವ್ಯವಸ್ಥೆ ಮಾಡುವ ಕುರಿತು ಜಿಲ್ಲಾಧಿಕಾರಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು. ಇದೇ ವೇಳೆ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ವಿಶೇಷ ಗಮನಕೊಟ್ಟು ವ್ಯಾಸಂಗ ಮಾಡಬೇಕು, ಪಚ್ಚೆದೊಡ್ಡಿಯ ವಿದ್ಯಾರ್ಥಿನಿಯರು ಉನ್ನತ ವ್ಯಾಸಂಗ ಮಾಡಬೇಕು, ಗ್ರಾಮದ ಅಭಿವೃದ್ಧಿಯನ್ನು ನೀವೇ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನನಗೆ ಈ ಊರು ಕಂಡರೇ ಬಹಳ ಖುಷಿ ಆಗುತ್ತದೆ, ಆದರೆ, ಹೊರಗಡೆಯಿಂದ ಬಂದವರಿಗಷ್ಟೇ ಖುಷಿ ಇಲ್ಲೇ ಇರುವವರಿಗೆ ಕಷ್ಟಯಾತನೆ, ಹಳ್ಳಿಯಲ್ಲಿ ಯಾರೂ ಓದುತ್ತಾರೆಯೋ ಅವರೇ ಗಟ್ಟಿಯಾಗಿ ಸಮಾಜದ ಆಸ್ತಿಯಾಗಿ ನಿಲ್ಲುತ್ತಾರೆ ಎಂದರು.
ಇದಕ್ಕೂ ಮುನ್ನ, ಶಾಸಕ ಆರ್. ನರೇಂದ್ರ , ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮತ್ತೊಂದು ಕೊಳವೆಬಾವಿ ಕೊರೆಸಿ ಇನ್ನಷ್ಟು ತೊಂಬೆಗಳನ್ನು ನಿರ್ಮಿಸಬೇಕು. ಇತರೆ ಕಾಡಂಚಿನ ಗ್ರಾಮಗಳ ಶಾಲೆಗಳಿಗೂ ಅಗತ್ಯ ವ್ಯವಸ್ಥೆ ಒದಗಿಸಬೇಕು, ನೀರಾವರಿ ಇಲಾಖೆಯ ಕಚೇರಿಯನ್ನು ಹನೂರಿನಲ್ಲಿ ಸ್ಥಾಪಿಸಿ ಅಧಿಕಾರಿಯೊಬ್ಬರನ್ನು ನೇಮಿಸಬೇಕೆಂದು ಅಹವಾಲು ಸಲ್ಲಿಸಿದರು.
ಅನ್ನ- ಸಾರು, ಪುಳಿವೊಗರೆ- ಅವಲಕ್ಕಿ ಉಪ್ಪಿಟ್ಟು: ಶಾಲಾ ವಾಸ್ತವ್ಯ ಹೂಡಿದ್ದ ಸಚಿವರಿಗೆ ಅನ್ನ, ಸಾರು, ಅವಲಕ್ಕಿ ಉಪ್ಪಿಟ್ಟು, ಪುಳಿವೊಗರೆ, ದೇಸಿ ಹಸುವಿನ ತುಪ್ಪ ಬಡಿಸಲಾಯಿತು. ನಾಲ್ವರು ಆರ್ ಎಸ್ ಎಸ್ ಕಾರ್ಯಕರ್ತರೊಂದಿಗೆ ಸಚಿವರು ವಾಸ್ತವ್ಯ ಹೂಡಿದರು. ಶಾಸಕ ಆರ್. ನರೇಂದ್ರ, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಜಿ. ಪಂ. ಸಿಇಒ ಹರ್ಷಲ್ ಭೋಯರ್ ಸೇರಿದಂತೆ ಇನ್ನಿತರರು ಇದ್ದರು.
ಅರಣ್ಯ ಕಾಯ್ದೆಗೆ ತಿದ್ದುಪಡಿಯಾಗಬೇಕು: ಇನ್ನಿತರ ಕಾಡೊಳಗಿನ ಗ್ರಾಮಗಳ ಪರಿಸ್ಥಿತಿ ಅವಲೋಕಿಸಿದರೇ ಪಚ್ಚೆದೊಡ್ಡಿಯ ಸಮಸ್ಯೆ ಏನೇನೂ ಅಲ್ಲ ಎನಿಸುತ್ತದೆ. ಅಭಿವೃದ್ಧಿಗೆ ತೊಡಕಾಗಿರುವುದು ಅರಣ್ಯ ಇಲಾಖೆಯ ಕಾಯ್ದೆಯಾಗಿದೆ. ಹಿಂದಿನ ಮುಖ್ಯಮಂತ್ರಿ, ಸಚಿವರು ಎಷ್ಟೇ ಪ್ರಯತ್ನಿಸಿದರೂ ಮೂಲಸೌಕರ್ಯ ಕೊಡಲಾಗಲಿಲ್ಲ. ಕೇಂದ್ರ ಸರ್ಕಾರದ ಅರಣ್ಯ ಕಾಯ್ದೆ ಎಲ್ಲಿಯವರೆಗೆ ತಿದ್ದುಪಡಿ ಆಗಲ್ಲವೊ ಅಲ್ಲಿಯವರೆಗೆ ಕಾಡಂಚಿನ ಗ್ರಾಮಗಳಿಗೆ ಡಾಂಬರಾಗಲಿ, ಮೆಟ್ಲಿಂಗಾಗಲಿ ಮಾಡಲಾಗಲ್ಲ. ಮೊದಲು ಅರಣ್ಯ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಜನರು ಒತ್ತಾಯಿಸಿದರು.