ಚಾಮರಾಜನಗರ: ಕೊರೊನಾ ಸಾಂಕ್ರಾಮಿಕ ತೊಲಗಲೆಂದು ಮಾರಮ್ಮ ಹಾಗೂ ಇನ್ನಿತರೆ ಶಕ್ತಿ ದೇವತೆಗಳನ್ನು ಬೇಡಿಕೊಂಡಿರುವ ಜನರು ಕೋಳಿಗಳನ್ನು ಬಲಿ ನೀಡಿರುವ ಘಟನೆ ಚಾಮರಾಜನಗರದ ಗಂಗಾಮತಸ್ಥರ ಬೀದಿಯಲ್ಲಿ ನಡೆಯಿತು.
ಕಳೆದ ವಾರವಷ್ಟೇ ನಡುರಸ್ತೆಯಲ್ಲಿ ಒಂಬತ್ತು ಮಂದಿ ಮುತ್ತೈದೆಯರು ಮಾರಮ್ಮನಿಗೆ ಗಂಗೆ ತಂದು ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಬೀದಿಯ ನಿವಾಸಿಗಳು ಕೋಳಿಗಳನ್ನು ಬಲಿಕೊಟ್ಟಿದ್ದಾರೆ. ಈ ಮೂಲಕ ಮಹಾಮಾರಿ ತೊಲಗಲಿ, ಜನಜೀವನ ಸಾಮಾನ್ಯವಾಗಲಿ ಎಂದು ಮಹಿಳೆಯರಾದಿಯಾಗಿ ಎಲ್ಲರೂ ಪ್ರಾರ್ಥಿಸಿದರು.
ಕೋಳಿ ರಕ್ತ ನೀಡಿದ ಬಳಿಕ ಬೀದಿಯಲ್ಲಿ ಕರ್ಪೂರ ಹಚ್ಚಿ, ಗಂಗೆಯನ್ನು ಪ್ರೋಕ್ಷಿಸಿ ಕೊರೊನಾ ಸಂಕಷ್ಟ ಬೇಗ ಮುಗಿದು ಜನಜೀವನ ಸಾಮಾನ್ಯವಾಗಬೇಕು, ಕೊರೊನಾಗೆ ಮೃತಪಡುತ್ತಿರುವುದು ನಿಲ್ಲಬೇಕೆಂದು ಕೇಳಿಕೊಳ್ಳಲಾಯಿತೆಂದು ಸ್ಥಳೀಯ ನಿವಾಸಿ ಚಾ.ರಂ.ಶ್ರೀನಿವಾಸಗೌಡ ತಿಳಿಸಿದರು.